ಉಳ್ಳಾಲ, ಡಿ 23 (DaijiworldNews/SM): ಪೌರತ್ವ ಮಸೂದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಇಬ್ಬರು ಬಡ ಅಮಾಯಕರ ಮೇಲೆ ಗೋಲಿಬಾರ್ ನಡೆಸಿದ್ದು ಆ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ನಡೆಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಈ ಘಟನೆ ಕುರಿತು ಕೇರಳ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಒತ್ತಾಯಿಸುವುದಾಗಿ ಕೇರಳದ ಮನ್ನಾರ್ ಕಾಡ್ ನ ಶಾಸಕ ಸಂಶುದ್ದೀನ್ ಆಗ್ರಹಿಸಿದ್ದಾರೆ.
ಮಂಗಳೂರು ಗೋಲಿಬಾರ್ ನಲ್ಲಿ ಮಡಿದವರ ಮನೆಗೆ ಸೋಮವಾರ ಭೇಟಿ ನೀಡಿದ ನಂತರ ಅವರು ತೊಕ್ಕೊಟ್ಟಿನಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಪೌರತ್ವ ಮಸೂದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಕಾನೂನು ಮೀರಿ ಇಬ್ಬರು ಅಮಾಯಕರ ಮೇಲೆ ಗುಂಡು ಹಾರಿಸಿದ್ದಾರೆ. ಆ ಬಗ್ಗೆ ಕರ್ನಾಟಕ ಎಡಿಜಿಪಿ ಮತ್ತು ಮಂಗಳೂರು ಕಮೀಷನರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಅಲ್ಲದೆ ಗೋಲಿಬಾರ್ ನಲ್ಲಿ ಮಡಿದವರ ಬಗ್ಗೆ ವರದಿ ಮಾಡಲೆಂದು ಬಂದ ಕೇರಳ ಮಾಧ್ಯಮಗಳಿಗೂ ನಿರ್ಬಂಧ ಹೇರಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದರು.
ಕೇರಳ ಮನ್ನಾರಕ್ಕಾಡ್ ಶಾಸಕ ಎ.ಸಂಶುದ್ದೀನ್ ಮಾತನಾಡಿ ಘಟನೆಯ ಸತ್ಯಾಸತ್ಯತೆಯು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಿದಲ್ಲಿ ಸತ್ಯ ಹೊರಬರಲಿದೆ. ಕಲ್ಲು ತೂರಾಟದಲ್ಲಿ ಕೇರಳದ ಮಲಯಾಳಿಗರ ಪಾತ್ರವಿದೆಯೆಂದು ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವವರಲ್ಲಿ ಒಬ್ಬನೂ ಮಲಯಾಳಿಗನಿಲ್ಲ. ಈ ಆರೋಪದ ಬಗ್ಗೆ ಸ್ಪಷ್ಟೀಕರಣ ಕೊಡಲು ನಾವು ಮಂಗಳೂರಿಗೆ ಬಂದಿದ್ದಾಗಿ ಹೇಳಿದರು.
ಕೇರಳದಿಂದ ಮಾಧ್ಯಮದವರು ಶವ ಮಹಜರು ಕುರಿತ ವರದಿ ಮಾಡಲು ಬಂದವರನ್ನು ಬಂಧಿಸಲಾಗಿದೆ. ಸುಳ್ಳು ಆರೋಪವನ್ನು ಹೊರಿಸಿ ಬಂಧಿಸಿರುವುದು ಮಾಧ್ಯಮದವರ ಸ್ವಾತಂತ್ರ್ಯ ಹರಣ ನಡೆಸಿದಂತಾಗಿದೆ. ಇದು ಅತ್ಯಂತ ಕಳವಳಕಾರಿ ಹಾಗೂ ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಟಿಯಲ್ಲಿ ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದಿನ್, ಮಲಪ್ಪರಂ ಕುಟ್ಯಾಡಿ ಪಾರಕ್ಕಲ್ ಶಾಸಕ ಅಬ್ದುಲ್ಲ , ಯೂತ್ ಲೀಗ್ ಕರ್ನಾಟಕ ರಾಜ್ಯಾಧ್ಯಕ್ಷ ಸಿದ್ದಿಕ್ ತಲಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ತಬೂಕ್ ಅಬ್ದುರ್ರಹಿಮಾನ್ ದಾರಿಮಿ , ದಕ್ಷಿಣ ಕನ್ನಡ ಯೂತ್ ಲೀಗ್ ಅಧ್ಯಕ್ಷ ಸಯ್ಯದ್ ಅಫುಹಮ್ ತಂಞಳ್, ಎಂಎಸ್ ಎಫ್ ರಾಷ್ಟ್ರೀಯ ಖಜಾಂಚಿ ನೌಶಾದ್ ಮಲಾರ್ ಹಾಗೂ ಮಂಜೇಶ್ವರ ಯೂತ್ ಲೀಗ್ ಅಧ್ಯಕ್ಷ ಸೈಫುಲ್ಲ ತಂಞಳ್ ಉಪಸ್ಥಿತರಿದ್ದರು.