ಉಡುಪಿ, ಡಿ 24(Daijiworld News/MSP): ಜಿಲ್ಲೆಯಲ್ಲಿ 2019-20 ರ 2ನೇ ತ್ರೈಮಾಸಿಕ ಅವಧಿಯಲ್ಲಿ 24427 ಕೋಟಿ ರೂ. ಡೆಪಾಟಿಸಿಟ್ ಆಗಿದ್ದು, ವಾರ್ಷಿಕ 5.78 ಶೇ. ಬೆಳವಣಿಗೆ ದಾಖಲಿಸಿದ್ದು, ಇದೇ ಅವಧಿಯಲ್ಲಿ 11914 ಕೋಟಿ ಸಾಲ ವಿತರಿಸಿದ್ದು, ಸೆಪ್ಟೆಂಬರ್ 30 ರವರೆಗೆ ಸಿಡಿ ಅನುಪಾತ 48.77ನಷ್ಟಿದೆ ಎಂದು ಸಿಂಡಿಕೇಟ್ ಬ್ಯಾಂಕ್ನ ರೀಜಿನಲ್ ಮ್ಯಾನೇಜರ್ ಸುಜಾತ ತಿಳಿಸಿದ್ದಾರೆ.
ಅವರು ಸೋಮವಾರ ಜಿಲ್ಲಾ ಪಂಚಾಯತ್ ನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.
2019 -20 ಸಾಲಿನ 2ನೇ ತ್ರೈಮಾಸಿಕ ಅಂತ್ಯದಲ್ಲಿ 3157 ಕೋಟಿ ವಾರ್ಷಿಕ ಗುರಿಯಲ್ಲಿ 2302 ಕೋಟಿ ರೂ. ಸಾಲ ವಿತರಣೆಯಾಗಿದ್ದು, ಈ ಪೈಕಿ 1248 ಕೋಟಿ ರೂ. ಕೃಷಿ ಕ್ಷೇತ್ರದಲ್ಲಿ, ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರಕ್ಕೆ 680 ಕೋಟಿ ರೂ. , ಶಿಕ್ಷಣ ಕ್ಷೇತ್ರಕ್ಕೆ 51 ಕೋಟಿ ರೂ., ವಸತಿ ಕ್ಷೇತ್ರಕ್ಕೆ 206 ಕೋಟಿ ವಿತರಿಸಲಾಗಿದೆ. ಆದ್ಯತಾ ವಲಯಕ್ಕೆ 2732 ಕೋಟಿ ರೂ. ವಾರ್ಷಿಕ ಗುರಿಯನ್ನು ಹೊಂದಿದ್ದು 1981 ಕೋಟಿ ರೂ. ವಿತರಣೆಯಾಗಿದೆ. ಇತರ ಕ್ಷೇತ್ರಕ್ಕೆ ವಾರ್ಷಿಕ ಗುರಿ 425 ಕೋಟಿ ರೂ. ನಲ್ಲಿ 321 ಕೋಟಿ ರೂ. ವಿತರಣೆಯಾಗಿದೆ ಎಂದು ಮಾಹಿತಿ ನೀಡಿದರು.
ಸಮಾಜದದಲ್ಲಿನ ದುರ್ಬಲ ವರ್ಗದವರ ಸಬಲೀಕರಣಕ್ಕಾಗಿ 39100 ಫಲಾನುಭವಿಗಳಿಗೆ 3541 ಕೋಟಿ ರೂ. ನ್ನು ಮೀಸಲಿಡಲಾಗಿದೆ. ಇದರಲ್ಲಿ 33652 ಪರಿಶಿಷ್ಠ ಜಾತಿ ಮತ್ತು ಪಂಗಡದ ಫಲಾನುಭವಿಗಳ 508 ಕೋಟಿ ರೂ. ಒಳಗೊಂಡಿದೆ. ಪುನರಾವಲೋಕನದ ಅವಧಿಯಲ್ಲಿ ಅಲ್ಪಸಂಖ್ಯಾತ ಸಮೂದಾಯಗಳ 52147 ಫಲಾನುಭವಿಗಳಿಗೆ 1232 ಕೋಟಿ ರೂ. ಗಳ ಆರ್ಥಿಕ ಸಹಾಯ ನೀಡಲಾಗಿದೆ. 132030 ಮಹಿಳಾ ಫಲಾನುಭವಿಗೆಳಿಗೆ 2458 ಕೋಟಿ ರೂ. ಆರ್ಥಿಕ ಸಹಾಯ ಒದಗಿಸಲಾಗಿದೆ. ಈ ಭಾರಿ 2614 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ 51 ಕೋಟಿ ರೂ. ವಿತರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಬ್ಯಾಂಕುಗಳ ಸಿಡಿ ಅನುಪಾತ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಸಿಡಿ ಅನುಪಾತ ವೃದ್ಧಿಸುವಂತೆ ಶ್ರಮಿಸುವಂತೆ ತಿಳಿಸಿದ ಆರ್ಬಿಐ ಬೆಂಗಳೂರುನ ಎಜಿಎಂ ಪಿಕೆ ಪಟ್ನಾಯಕ್ , ಬ್ಯಾಂಕಿಂಗ್ ಚಟುವಟಿಕೆಗೆ ಸಂಬಂಧಿಸಿದಂತೆ ಆರ್ಬಿಐ ನಿಂದ ಹೊರಡಿಸಲಾದ ಹೊಸ ಮಾರ್ಗಸೂಚಿ ಮತ್ತು ಸೂಚನೆಗಳ ಬಗ್ಗೆ ಮಾಹಿತಿ ನೀಡುತ್ತಾ ಜಿಲ್ಲೆಯ ಸಿಡಿ ಅನುಪಾತವನ್ನು ಹೆಚ್ಚಿಸುವಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್ಗಳು ಶ್ರಮಿಸಬೇಕು. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರಚುರ ಪಡಿಸಬೇಕು ಎಂದು ಹೇಳಿದರು.
ಲೀಡ್ ಡಿಸ್ಟ್ರಿಕ್ಟ್ ಚೀಫ್ ಮ್ಯಾನೇಜರ್ ರುದ್ರೇಶ್ ಡಿಸಿ ಮಾತನಾಡಿ, 23228 ಕಿಸಾನ್ ಕಾರ್ಡ್ ಹೊಂದಿರುವವರಿಗೆ ಕಿನಾಸ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ 210 ಕೋಟಿ ರೂ. ವಿತರಣೆಯಾಗಿದೆ ಎಂದರು. ನಬಾರ್ಡ್ ಎ.ಜಿ.ಎಂ. ರಮೇಶ್ ಮಾತನಾಡಿ, ಜಿಲ್ಲೆಯ ಬ್ಯಾಂಕ್ಗಳಲ್ಲಿನ ಲೋನ್ ವಿತರಣೆಯು ತೃಪ್ತಿಕರವಾಗಿಲ್ಲದಿರುವುದರಿಂದ ಆದ್ಯತೆಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಬೇಕು. ನಾಬಾರ್ಡ್ ಪ್ರಾಯೋಜಿತ ಯೋಜನೆ ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಗುಂಪು ಸಾಲಗಳನ್ನು ವಿತರಿಸುವಂತೆ ಬ್ರಾಂಚ್ ಮ್ಯಖ್ಯಸ್ಥರಿಗೆ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲ್ಲೋತ್ ಮಾತನಾಡಿ, ಸರಕಾರ ಪ್ರಯೋಜಿತ ಎಲ್ಲಾ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಗೊಳಿಸುವಲ್ಲಿ ಸರಕಾರಿ ಇಲಾಖೆ ಮತ್ತು ಬ್ಯಾಂಕುಗಳು ಸಹಕರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್ನ ಮುಖ್ಯಸ್ಥರು ಹಾಜರಿದ್ದರು.