ಮಂಗಳೂರು, ಡಿ 24 (Daijiworld News/MB) : ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದು ಕಲ್ಲು ತೂರಾಟಕ್ಕೆ ಮೊದಲೇ ಷಡ್ಯಂತ್ರ ನಡೆಸಿದ್ದಾರೆಯೇ ಎಂಬ ಅನುಮಾನ ಹುಟ್ಟಿಸಿದೆ.
ಮಂಗಳೂರು ನಗರ ಪೊಲೀಸರು ಬಿಡುಗಡೆ ಮಾಡಿರುವ ಈ ಗಲಭೆಗೆ ಸಂಬಂಧಿಸಿದ ಕೆಲವು ದೃಶ್ಯಾವಳಿಗಳನ್ನು ಹಾಗೂ ಫೋಟೋಗಳಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಮಧ್ಯಾಹ್ನದ ವೇಳೆ ಹಿಂಸಾ ರೂಪಕ್ಕೆ ತಿರುಗಿದ್ದು ಕಲ್ಲುಗಳನ್ನು ತುಂಬಿಸಿದ್ದ ಹಲವು ಗೋಣಿ ಚೀಲಗಳನ್ನು ಒಂದು ಗೂಡ್ಸ್ ಆಟೋದಲ್ಲಿ ತುಂಬಿಸಿಡಲಾಗಿತ್ತು ಎಂದು ತಿಳಿದು ಬಂದಿದೆ.
ಅಷ್ಟು ಮಾತ್ರವಲ್ಲದೇ ಈ ಪ್ರತಿಭಟನಕಾರರು ಆ ಗೋಣಿ ಚೀಲಗಳಿಂದ ಕಲ್ಲುಗಳನ್ನು ತೆಗೆದು ತೂರುವ ದೃಶ್ಯಾವಳಿಗಳು ಕೂಡಾ ಸೆರೆಯಾಗಿದೆ. ಹಾಗೆಯೇ ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಬಾರದೆಂದು ಕ್ಯಾಮೆರಗಳ ದಿಕ್ಕು ತಪ್ಪಿಸಿದ್ದಾರೆ.
ಫೋಟೋ – ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಈ ಗಲಭೆಕೋರರ ಬಗ್ಗೆ ಮಾಹಿತಿ ತಿಳಿದವರು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ದಂಗೆಕೋರರ ಮಾಹಿತಿ ಮತ್ತು ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇರಿಸುವುದಾಗಿ ಪ್ರಕಟಿಸಿದ್ದಾರೆ.
ಕೆಲವು ಪ್ರತಿಭಟನಕಾರರು ಮುಖಕ್ಕೆ ಬಟ್ಟೆ ಮುಚ್ಚಿ ಕಲ್ಲು ತೂರಾಟ ಮಾಡಿದ್ದು ಸಿಸಿಟಿವಿಯನ್ನು ಒಡೆದು ಹಾಕಿದ್ದಾರೆ. ಆ ಹಿನ್ನಲೆಯಲ್ಲಿ ಇದು ಪೂರ್ವಯೋಜಿತ ಕೃತ್ಯವಾಗಿರುವ ಸಾಧ್ಯತೆಗಳು ಹೆಚ್ಚಾಗಿದೆ.
ಗನ್ ಅಂಗಡಿಗೆ ನುಗ್ಗಲು ಯತ್ನ: ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಹಿಂಸಾಚಾರದಲ್ಲಿ ತೊಡಗಿದ ದುಷ್ಕರ್ಮಿಗಳು ಬಂದರು ಗೋಳಿಕಟ್ಟ ಬಜಾರ್ನಲ್ಲಿರುವ ಕೋವಿ, ಗುಂಡು, ಗಂಧಕ ದಾಸ್ತಾನಿರುವ ಅಂಗಡಿಗಳಿಗೆ ನುಗ್ಗುವ ಪ್ರಯತ್ನ ಮಾಡಿದ್ದು ಕೊನೆಯ ಗಳಿಗೆಯಲ್ಲಿ ಈ ಪ್ರಯತ್ನ ವಿಫಲವಾಗಿದೆ ಎಂದು ತಿಳಿದುಬಂದಿದೆ. ಪ್ರತಿಭಟನೆ ನಡೆದ ಬಂದರು ಠಾಣೆಗೆ 150 ಮೀ ದೂರದಲ್ಲೇ ಗನ್ ಅಂಗಡಿ ಇದ್ದು ಹಿಂಸಾಚಾರದಲ್ಲಿ ತೊಡಗಿದ ಆರೋಪಿಗಳು ಅಂಗಡಿಯ ಮರದ ಬಾಗಿಲು ಮುರಿದು ಬೀಗ ಹಾಗೂ ಶಟರ್ ಒಡೆಯುವ ಪ್ರಯತ್ನ ಮಾಡಿದ್ದು. ಪೊಲೀಸ್ ವಾಹನ ಆ ಪ್ರದೇಶಕ್ಕೆ ಬಂದ ಕಾರಣದಿಂದಾಗಿ ಮತ್ತಷ್ಟು ಅನಾಹುತ ನಡೆದಿಲ್ಲ ಎಂದು ತಿಳಿದು ಬಂದಿದೆ.