ಉಡುಪಿ ಡಿ 24(Daijiworld News/MSP): ಫೇಸ್ಬುಕ್ ನಲ್ಲಿ , ಸೌದಿ ದೊರೆಯ ವಿರುದ್ದ ಪೋಸ್ಟ್ ಮಾಡಿದ ಅರೋಪದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿತನಾಗಿರುವ , ಉಡುಪಿ ಜಿಲ್ಲೆ ಗೋಪಾಡಿ ಗ್ರಾಮದ ಹರೀಶ್ ಬಂಗೇರಾ ಅವರ ಕುರಿತು ಸೋಮವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ ವೀಕ್ಷಿಸಿದ, ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು , ಕೂಡಲೇ ರಿಯಾದ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪ್ರಕರಣದ ಮಾಹಿತಿ ಪಡೆದರು.
ಭಾರತೀಯ ದೂತವಾಸದ ಅಧಿಕಾರಿಗಳೊಂದಿಗೆ ಮಾತನಾಡಿದ ಕಾರ್ಯದರ್ಶಿಗಳು, ಆದಷ್ಟು ಶೀಘ್ರದಲ್ಲಿ ಹರೀಶ್ ಬಂಗೇರಾ ಅವರ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವಂತೆ ಕೋರಿದರು. ಈ ಪ್ರಕರಣವು ಕಾನೂನು ಮೂಲಕ ಇತ್ಯರ್ಥವಾಗಬೇಕಿದ್ದು, ಸ್ವಲ್ಪ ವಿಳಂಬವಾಗಲಿದ್ದು, ಬಂಧನದಲ್ಲಿರುವ ಅವರು ಕ್ಷೇಮವಾಗಿದ್ದಾರೆ ಎಂದು ದೂತವಾಸದ ಅಧಿಕಾರಿಗಳು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.
ಮಂಗಳವಾರ, ಹರೀಶ್ ಬಂಗೇರಾ ಅವರ ಪತ್ನಿ ಶ್ರೀಮತಿ. ಸುಮನ ಬಂಗೇರಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕಾರ್ಯದರ್ಶಿಗಳು, ಪ್ರಕರಣದ ಪ್ರಗತಿ ಬಗ್ಗೆ ಮಾಹಿತಿ ನೀಡಿ, ಸರ್ಕಾರವು ತಮ್ಮ ಪರವಾಗಿ ನಿಂತಿದ್ದು ಆದಷ್ಟು ಶೀಘ್ರದಲ್ಲಿ ತಮ್ಮ ಪತಿಯ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಅವರಲ್ಲಿ ಧೈರ್ಯ ತುಂಬಿದರು.
ನಂತರ ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ, ಗೋಪಾಡಿ ಗ್ರಾಮದಲ್ಲಿನ ಹರೀಶ್ ಬಂಗೇರಾ ಅವರ ಬೇಟಿ ನೀಡಿ, ಶ್ರೀಮತಿ ಸುಮನ ಬಂಗೇರಾ ಅವರನ್ನು ಬೇಟಿ ಮಾಡಿ, ಹರೀಶ್ ಬಂಗೇರ ಅವರ ಬಿಡುಗಡೆ ಕುರಿತಂತೆ ಇಲಾಖೆವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಸುಮನ ಬಂಗೇರಾ, ಬಂಧನವಾದ ಬಳಿಕ ತಮ್ಮ ಪತಿ ಹರೀಶ್ ಬಂಗೇರಾ , ಅವರು ಕೆಲಸ ಮಾಡುವ ಕಂಪನಿಯು ತಮ್ಮನ್ನು ಸಂಪರ್ಕಿಸಿ, ಒಂದು ಬಾರಿ ಮಾತನಾಡಿತ್ತು. ತದ ನಂತರ ಎಂಬೆಸ್ಸಿಯು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಸೌದಿ ಪೋಲೀಸ್ ಮುಖಾಂತರವೆ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ತಮ್ಮ ಪತಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸಬೇಕಾಗಿ ಕೋರುತ್ತಾ, ಸಾಧ್ಯವಾದಲ್ಲಿ ತಮ್ಮ ಪತಿಯೊಂದಿಗೆ ಒಮ್ಮೆ ದೂರವಾಣಿಯಲ್ಲಿ ಮಾತನಾಡಿಸಲು ಅವಕಾಶ ಮಾಡಿಕೊಡುವಂತೆ ಅವರು ಕೋರಿದರು.
ಹರೀಶ್ ಬಂಗೇರ ಅವರು , ಕಳೆದ ಆರು ವರ್ಷಗಳಿಂದ ಅಲ್ಲೇ ಕೆಲಸ ಮಾಡುತ್ತಿದ್ದು, ಹಿಂದಿನ ವರ್ಷ ಜನವರಿಯಲ್ಲಿ ಊರಿಗೆ ಭೇಟಿ ನೀಡಿದ್ದರು. ಅವರು ಬಂಧನಕ್ಕೊಳಗಾದ ಸುದ್ದಿ ತಿಳಿಯುತ್ತಲೇ ಪ್ರಕ್ರಿಯೆಗನುಗುಣವಾಗಿ , ಉಡುಪಿ ಸೆನ್ ಪೋಲಿಸರಿಗೆ ಅರ್ಜಿ ನೀಡಿದ್ದು, ಪ್ರಕರಣವನ್ನು ಜಿಲ್ಲೆಯ ಮಾನವ ಹಕ್ಕು ಆಯೋಗದ ಗಮನಕ್ಕೂ ತರಲಾಗಿದೆ ಎಂದು ಹರೀಶ್ ಬಂಗೇರ ಅವರ ಮಾವ ಶ್ರೀನಿವಾಸ್ ಬಂಗೇರ ತಿಳಿಸಿದರು.