ಮಂಗಳೂರು, ಡಿ 24 (Daijiworld News/MB) : "ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಘಟನೆಯ ಕುರಿತು ಪಕ್ಷಾತೀತವಾಗಿ ನ್ಯಾಯಾಂಗ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಅಮಾನತು ಮಾಡಬೇಕು" ಎಂದು ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ಮತ್ತು ಮಾಜಿ ಸಂಸದ ಪಿ.ಕರುಣಾಕರನ್ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ನಿಂದಾಗಿ ಮೃತಪಟ್ಟ ಇಬ್ಬರ ಮನೆಗೆಳಿಗೆ ಭೇಟಿ ನೀಡಿದ ಅವರು, "ಪೊಲೀಸರಿಗೆ ಗೋಲಿಬಾರ್ ನಡೆಸುವ ಅಗತ್ಯವಿರಲಿಲ್ಲ. ಮೊದಲು ಅವರು ಗಾಳಿಯಲ್ಲಿ ಗುಂಡು ಹಾರಿಸ ಬಹುದಿತ್ತು. ಯಾವುದೇ ಕಾರಣ ಇಲ್ಲದೇ ಪೊಲೀಸರು ಹೇಗೆ ಅಮಾಯಕರನ್ನು ಹತ್ಯೆ ಮಾಡಿದ್ದಾರೆ" ಎಂದು ಪ್ರಶ್ನಿಸಿದರು.
"ಸರಕಾರ ಈಗ ತನಿಖೆಗೆ ಆದೇಶ ಮಾಡಿದೆ. ಆದರೆ ಅದು ಸಾಲುವುದಿಲ್ಲ. ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಈ ಗಲಭೆಯ ವೇಳೆ ಕಲ್ಲು ತೂರಾಟ ನಡೆಸಿರುವ ದೃಶ್ಯಾವಳಿಗಳು ವೈರಲ್ ಆಗಿದೆ. ಈ ಕುರಿತು ತನಿಖೆ ನಡೆಸಬೇಕು" ಎಂದು ಒತ್ತಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ "ಕರ್ನಾಟಕ ಹಾಗೂ ಕೇರಳಕ್ಕೆ ಉತ್ತಮ ಸಂಬಂಧವಿದೆ. ನಮ್ಮ ಕೇರಳದವರು ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗಾಗಿ ಪ್ರತಿನಿತ್ಯ ಮಂಗಳೂರಿಗೆ ಆಗಮಿಸುತ್ತಾರೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಫ್ಐ ಕರ್ನಾಟಕ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿಕೆ ಇಂತಿಯಾಝ್, ಸಿ.ಪಿ.ಐ.ಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಯಾದವ್ಶೆಟ್ಟಿ, ಕಾಸರಗೋಡು ಸಿಪಿಐಎಂ ಪಕ್ಷದ ಮುಖಂಡ ಜಯಾನಂದ, ಕರ್ನಾಟಕ ಸಿಪಿಐಎಂ ಮುಖಂಡೆ ವರಲಕ್ಷ್ಮೀ, ರಾಜ್ಯಸಭಾ ಸದಸ್ಯ ಎಲಮಾರ ಕರೀಂ, ಶಾಕರಾದ ಎಂ ರಾಜಗೋಪಾಲನ್, ಕೆ.ಕುಂಞಿರಾಮನ್, ಸಿಪಿಐಎಂ ರಾಜ್ಯ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.