ಕುಂದಾಪುರ, ಡಿ 24(Daijiworld News/MSP): ಬೈಕ್ನಲ್ಲಿ ತೆರಳುತ್ತಿದ್ದ ಬಾಬು ಶೆಟ್ಟಿಯನ್ನು ಹಾಡಹಗಲೇ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆಗೈದ ಘಟನೆಗೆ ಎಂಟು ದಿನಗಳು ಕಳೆದರೂ ಬಾಬು ಶೆಟ್ಟಿಯ ಕೊಲೆಗಡುಕರನ್ನು ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳ ಪತ್ತೆಗೆ ಐದು ತನಿಖಾ ತಂಡ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಪ್ರಕರಣ ನಡೆದ ತಕ್ಷಣ ಕೊಲೆಯಾದವರ ಸಹೋದರರು ಜಾಗದ ಪ್ರಕರಣಕ್ಕೆ ಸಂಬಂಧಿಸಿ ಇದ್ದ ತಕರಾರೇ ಕೊಲೆಗೆ ಕಾರಣ ಎಂದು 13 ಜನರ ವಿರುದ್ಧ ದೂರು ನೀಡಿದ್ದರು. ಆದರೆ ಪೊಲೀಸರು ಅವರನ್ನು ತನಿಖೆಗೊಳಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗುತ್ತಿದೆ.
ಬಾಬು ಶೆಟ್ಟಿ
ಐವರು ಪೊಲೀಸ್ ವಶಕ್ಕೆ : ಬಾಬು ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಶಂಕಿತ ಆರೋಪಿಗಳನ್ನು ಪೊಲೀಸರ ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದ್ದು, ಶುಕ್ರವಾರ ಕುಮುಟಾ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆನ್ನಲಾಗಿದೆ. ಬಳಿಕ ಸೋಮವಾರ ಐವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅದರಲ್ಲಿ ಇಬ್ಬರು ಆನಗಳ್ಳಿ ಮೂಲದವರು ಎಂದು ತಿಳಿದುಬಂದಿದೆ. ಉಳಿದ ಮೂವರು ನೇರಳಕಟ್ಟೆಯ ನಿವಾಸಿಗಳು ಎಂದು ಅಂದಾಜಿಸಲಾಗಿದೆ.
ಸುಪಾರಿ ಕೊಲೆ: ಬಡ್ಡಿ ವ್ಯವಹಾರ ಹಾಗೂ ಪರಸ್ತ್ರೀ ವ್ಯಾಮೋಹವಿದ್ದ ಬಾಬು ಶೆಟ್ಟಿ ಹತ್ಯೆಗೆ ನಿಖರ ಕಾರಣಗಳನ್ನು ಪತ್ತೆ ಹಚ್ಚುವುದು ಸಧ್ಯಕ್ಕೆ ಅಸಾಧ್ಯವಾಗಿದ್ದರೂ ಹಲವಾರು ಕಡೆಗಳಲ್ಲಿ ಬಡ್ಡಿ ಕಂತಿನ ಹಣ ನೀಡಲು ಸಾಧ್ಯವಾಗದೇ ಇದ್ದಾಗ ಹಣ ಪಡೆದುಕೊಂಡವರ ಮನೆಯ ಹೆಣ್ಣು ಮಕ್ಕಳನ್ನೇ ಕೇಳುತ್ತಿದ್ದ ಎನ್ನುವ ಮಾತುಗಳು ಕೇಳಿ ಬಂದಿದ್ದು, ಇದೇ ಕಾರಣಕ್ಕೆ ಹಣ ಮತ್ತು ಹೆಣ್ಣಿನ ವಿಚಾರದಲ್ಲಿಯೇ ಈ ಕೊಲೆ ನಡೆದಿರಬಹುದು ಎಂದು ಘಟನೆ ನಡೆದಾಗಿನಿಂದಲೇ ಬಾಬು ಶೆಟ್ಟಿಯನ್ನು ಸಮೀಪದಿಂದ ಬಲ್ಲವರು ಶಂಕಿಸಿದ್ದಾರೆ. ಆದರೆ ಸಹೋದರರು ನೀಡಿದ ದೂರಿನ ಮೇಲೆ ವಿಚಾರಣೆಯ ಕಾರಣಕ್ಕೆ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಹಚ್ಚುವುದು ವಿಳಂಬವಾಗಿದೆ ಎಂದು ಎನ್ನಲಾಗುತ್ತಿದೆ. ಆದರೆ ನಿಜವಾಗಿಯೂ ಬಾಬು ಶೆಟ್ಟಿ ಕೊಲೆ ಯಾಕಾಯಿತು ಎನ್ನುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಶಂಕಿತ ವಶಕ್ಕೆ ಪಡೆಯಲಾದ ಆರೋಪಿಗಳೇ ನಿಜವಾದ ಅಪರಾಧಿಗಳೇ ಎನ್ನುವುದನ್ನೂ ಪೊಲೀಸರೇ ಬಹಿರಂಗಪಡಿಸಬೇಕಿದೆ.