ಕಾರ್ಕಳ, ಡಿ 25(Daijiworld News/MSP): ಬೆಳ್ಮಣ್ ಗುಂಡ್ಯಡ್ಕ ಮಟ್ಕಾಕೆರೆ ಮನೆಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಚೈನ್ ಹಾಗೂ ಪಾರ್ಸ್ಪೋರ್ಟ್ ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸಹಿತ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ನಾಜೀರ್ ಹುಸೈನ್ ಬಂಧಿಸಿದ್ದಾರೆ.
ಬಂಧಿತ ಆರೋಪಿ ಬೆಳ್ಮಣ್ನ ರೆನಿಟಾ ಪಿಯಾ(22), ಶಿರ್ವದ ಫಯಾಸ್(25), ಶಿರ್ವದ ಶೇಯಾಬ್(28) ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ಆಶೀಸ್(28) ಬೇರೆಯೊಂದು ಪ್ರಕರಣದಲ್ಲಿ ಸಿಲುಕಿ ಈಗಾಗಲೇ ಜೈಲಿನೊಳಗಿದ್ದಾನೆ.
ಘಟನೆಯ ವಿವರ:
2019 ನವಂಬರ್ 23ರ ಮಧ್ಯಾಹ್ನ 1.30ರ ವೇಳೆಗೆ ಬೆಳ್ಮಣ್ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಈ ಪ್ರಕರಣ ನಡೆದಿದೆ. ಎರಡು ಬೈಕ್ನಲ್ಲಿ ಬಂದಿದ್ದ ರೆನಿಟಾ ಪಿಯಾ ಸಹಿತ ನಾಲ್ವರು ಆರೋಪಿತರು ಐರಿನ್ ಮಥಾಯಸ್ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದರು. ಕೊಠಡಿಯಲ್ಲಿ ಮಲಗಿಕೊಂಡಿದ್ದ ನತಾಲಾ ಮಥಾಯಸ್ರವರ ಕುತ್ತಿಗೆಯಲ್ಲಿದ್ದ ಸುಮಾರು 2 ಪವನ್ ತೂಕದ ಕ್ರಾಸ್ ಪೆಂಡೆಂಟ್ ಇರುವ ಚಿನ್ನದ ಸರವನ್ನು ಎಳೆದೊಯ್ದಿದ್ದರು. ಇದೇ ಸಂದರ್ಭದಲ್ಲಿ ಮೈದುನ ಜೆರಾಲ್ಡ್ ಮಥಾಯಸ್ನ ಪಾಸ್ ಪೋರ್ಟ್ನ್ನು ಆರೋಪಿಗಳು ಹೊತ್ತೊಯ್ದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.ಈ ಕೃತ್ಯದಲ್ಲಿ ತೊಡಗಿದ್ದವರ ಪೈಕಿ ರೆನಿಟಾ ಪಿಯಾ ಪರಿಚಯಸ್ಥೆಯಾಗಿದ್ದಳು.
ಮಂಗಳೂರಿನಲ್ಲಿ ಮಾರಾಟ:
ಕಳವುಗೈದ 2 ಪವನ್ ತೂಕದ ಕ್ರಾಸ್ ಪೆಂಡೆಂಟ್ ಇರುವ ಚಿನ್ನದ ಸರವನ್ನು ಕಳವುಗೈದ ಆರೋಪಿತರು ಮಂಗಳೂರು ಉರ್ವದ ಲೇಡಿಹಿಲ್ ದಿವ್ಯ ಜುವೆಲ್ಲರ್ಸ್ಗೆ ಮಾರಾಟ ಮಾಡಿರುವ ಅಂಶವನ್ನು ಪೊಲೀಸ ತನಿಖೆಯಿಂದ ತಿಳಿದುಬಂದಿದೆ.
ಕೊಲೆ ಆರೋಪಿಯ ಮಗಳು:
ಡಿಸೆಂಬರ್ 20ರಂದು ಬೆಳ್ಮಣ್ನ ಬೃಂದಾವನ ಮನೆಯಲ್ಲಿದ್ದ ಒಂಟಿ ಮಹಿಳೆ ಬಿ.ಭರತ ಲಕ್ಷ್ಮೀ(68) ಕೊಲೆಗೈದು ಅಪಾರ ಪ್ರಮಾಣದಲ್ಲಿ ಚಿನ್ನಾಭರಣವನ್ನು ದರೋಡೆ ಮಾಡಿ, ಮೃತದೇಹವನ್ನು ಕಲ್ಯಾ ಹಾಳೆಕಟ್ಟೆಯ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿ ಎಸೆದಿರುವ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಬೆಳ್ಮಣ್ ರೋನಾಲ್ಡ್ ಬರ್ಬೋಜಾ(45) ಎಂಬಾತನ ಮಗಳೇ ರೆನಿಟಾ ಪಿಯಾ.
ಶೋಕಿ ಜೀವನ ನಡೆಸುವ ಉದ್ದೇಶ ಹೊಂದಿ ಯುವತಿ ಕ್ರಿಮಿನಲ್ ಇತಿಹಾಸ ಹೊಂದಿರುವ ಯುವಕರ ತಂಡವೊಂದನ್ನು ಕಟ್ಟಿಕೊಂಡು ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದಳು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.