ಮೂಡುಬಿದಿರೆ, ಡಿ 25(Daijiworld News/MB) : "ಕೋಣಗಳನ್ನು ಓಡಿಸುವುದು ಅಷ್ಟು ಸುಲಭವಲ್ಲ, ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಇಲ್ಲಿನ ಕಂಬಳವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಂಬಳ ಬಹಳ ವೈಶಿಷ್ಟ್ಯವಾದಂತದ್ದು, ಅಂತಹ ಕಂಬಳ ಸಮಾರಂಭವನ್ನು ಉದ್ಘಾಟನೆ ಮಾಡುವ ಪುಣ್ಯ ಕೆಲಸ ನನಗೆ ದೊರಕಿದೆ. ಈ ಭಾಗದಲ್ಲಿ ಕಂಬಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಬಹಳ ದೊಡ್ಡ ಮಟ್ಟದಲ್ಲಿ ಕಂಬಳ ನಡೆಸಲಾಗುತ್ತದೆ. ಕಂಬಳಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕು" ಎಂದು ತಿಳಿಸಿದ್ದಾರೆ.
ರಾಣಿ ಅಬ್ಬಕ್ಕ ಪುತ್ಥಳಿಯನ್ನು ಉದ್ಘಾಟಿಸಿದ ಅವರು, "ಕಂಬಳವನ್ನು ಉದ್ಘಾಟಿಸುವ ಹಾಗೂ ರಾಣಿ ಅಬ್ಬಕ್ಕ ಪುತ್ಥಳಿ ಅನಾವರಣ ಮಾಡಲು ಜನರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಇದು ನನ್ನ ಪುಣ್ಯ" ಎಂದರು.
ಹಾಗೆಯೇ ಈ ಸಂದರ್ಭದಲ್ಲಿ ಮಂಗಳೂರು ಗಲಭೆಗೆ ಸಂಬಂಧಿಸಿ ಮಾತನಾಡಿದ ಅವರು, "ಗಲಭೆಯಲ್ಲಿ ಗುಂಡೇಟಿನಿಂದ ಮೃತರಾದವರ ಮೇಲೆ ಹಲವು ಆರೋಪಗಳಿವೆ. ಈ ಪ್ರಕರಣದಲ್ಲಿ ಅವರೂ ಅಪರಾಧಿಗಳೆಂದು ಸಾಬೀತಾಗುತ್ತಿದೆ. ಈ ಹಿನ್ನಲೆಯಲ್ಲಿ ಅವರಿಗೆ ಪರಿಹಾರ ನೀಡುವುದು ಸೂಕ್ತವಲ್ಲ ಎನ್ನುವುದು ಎಲ್ಲರ ಅಭಿಪ್ರಾಯ. ಹಾಗಾಗಿ ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದು" ಎಂದು ಸ್ಪಷ್ಟ ಪಡಿಸಿದ್ದಾರೆ.