ಮಂಗಳೂರು, ಡಿ 25(Daijiworld News/MSP):" ಬಿ. ಎಸ್ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಅನರ್ಹರಾಗಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಡಿ.25 ರ ಬುಧವಾರ ನಗರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವೀರಪ್ಪ ಮೊಯ್ಲಿ, ”ಮಂಗಳೂರು ಹಿಂಸಾಚಾರದಲ್ಲಿ ನಡೆದ ಗುಂಡೇಟಿಗೆ ಇಬ್ಬರು ಅಮಾಯಕರು ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿ, ಮೃತರ ಹೆಸರು ಎಫ್ ಐ ಆರ್ ನಲ್ಲಿದೆ ಎಂದು ಈಗ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ . ಇದು ಆಡಳಿತದ ದುರುಪಯೋಗ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೇಜವಾಬ್ದಾರಿ ಹೇಳಿಕೆಯಾಗಿದೆ. ಹೀಗಾಗಿ ಸಿಎಂ ಅವರ ಈ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತಿದ್ದು ಬಿಎಸ್ ವೈ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಯೋಗ್ಯರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಯಾವುದೇ ದೌರ್ಜನ್ಯ, ಗಲಭೆಗಳಿಲ್ಲದೇ ಇಡೀ ರಾಜ್ಯದಲ್ಲಿ ಸೆಕ್ಷನ್ 144 ಅನ್ನು ಹೇರುವ ಅಗತ್ಯವಿಲ್ಲ, ಮಂಗಳೂರಿನಲ್ಲಿ ಪೊಲೀಸರು ಗೋಲಿಬಾರ್ ಪ್ರೋಟೋಕಾಲ್ ಉಲ್ಲಂಘಿಸಿದ ಕಾರಣ ಎರಡು ಜೀವ ಹೋಗಿದೆ. ಇನ್ನು ನಾಲ್ಕೈದು ಸಾವು ಆಗಬೇಕಿತ್ತು, ಆದ್ರೆ ದೇವರ ದಯೆಯಿಂದ ಆಗಿಲ್ಲ' ಎಂದರು .
'ಯು.ಟಿ.ಖಾದರ್ ಹೇಳಿಕೆಯನ್ನೇ ದೊಡ್ಡ ವಿಚಾರದಂತೆ ಸುಖಾ ಸುಮ್ಮನೆ ವಿವಾದ ಮಾಡಲಾಗುತ್ತದೆ ಆದರೆ ನನಗೆ ಗೊತ್ತು ಶಾಸಕ ಯು.ಟಿ ಖಾದರ್ ಅವರು ಕೋಮುವಾದಿ ವ್ಯಕ್ತಿಯಲ್ಲ ಎಂದು. ಆದರೆ ಬಿಜೆಪಿ ಸುರೇಶ್ ಅಂಗಡಿ, ಸಿ.ಟಿ.ರವಿ, ಪ್ರಹ್ಲಾದ್ ಜೋಶಿ ಅವರ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇವರೆಲ್ಲರೂ ಕೋಮುವಾದದ ಹಿನ್ನೆಲೆಯುಳ್ಳವರಾದ ಕಾರಣ ಅವರ ಹೇಳಿಕೆಗೆ ಬಲವಿದೆ' ಎಂದು ಆರೋಪಿಸಿದರು.
"ರಾಷ್ಟ್ರವ್ಯಾಪಿ ಪ್ರತಿಭಟನೆ ವ್ಯಕ್ತವಾಗುತ್ತಿರುವ ಸಿಎಎ ಮತ್ತು ಎನ್ಆರ್ಸಿ ಅನುಷ್ಠಾನವು ಜನರಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಎನ್ಆರ್ಸಿ ಮತ್ತು ಸಿಎಎ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೋದಿ ಮತ್ತು ಅಮಿತ್ ಶಾ ಇಬ್ಬರೂ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಆರೋಪಿಸಿದರು.
ಈ ಸಂದರ್ಭ ಶಾಸಕ ಯು ಟಿ ಖಾದರ್, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ ಮತ್ತು ಇತರರು ಉಪಸ್ಥಿತರಿದ್ದರು