ಕುಂದಾಪುರ, ಜ 22: ಪ್ರತಿದಿನ ಮೀನುಗಾರಿಕೆಯಲ್ಲಿ ಬ್ಯೂಸಿಯಾಗಿದ್ದ ಮೀನುಗಾರರು ಜ 22 ರ ಭಾನುವಾರ ಮೀನುಗಾರಿಕೆಗ ರಜೆ ಹಾಕಿ ಮೀನುಹಿಡಿಯುವ ಸ್ಪರ್ಧೆ, ಗಾಳಿಪಟ ಹಾರಿಸುವುದು, ಕಬ್ಬಡಿ ಮೊದಲಾದ ಆಟಗಳಲ್ಲಿ ಬ್ಯೂಸಿಯಾಗಿದ್ದರು. ಹೌದು ಭಾರತೀಯ ಜನತಾ ಪಾರ್ಟಿಯ ಮೀನುಗಾರಿಕಾ ಪ್ರಕೋಷ್ಟದ ವತಿಯಿಂದ ಆಯೋಜಿಸಲಾದ ಮತ್ಸ ಸಂಗಮ ಕಾರ್ಯಕ್ರಮದಲ್ಲಿ ಮೀನುಗಾರರು, ಸ್ಥಳೀಯರು ಭಾಗವಹಿಸಿ ಎಂಜಾಯ್ ಮಾಡಿದರು. ಊರ್ಮನಿ ಹಬ್ಬದ ಯಶಸ್ಸಿನಿಂದ ಬೀಗಿದ್ದ ಕಿನಾರ ಬೀಚ್ಗೆ ಮತ್ಸಸಂಗಮ ಇನ್ನಷ್ಟು ಮೆರುಗು ನೀಡಿದ್ದು, ಮೀನಿನ ಖಾಧ್ಯಗಳು ಜನರಿಗೆ ಸವಿಯೂಟ ನೀಡಿದವು. ಮಧ್ಯಾಹ್ನ 3 ಗಂಟೆಗೆ ಹಗ್ಗಜಗ್ಗಾಟಕ್ಕೆ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಚಾಲನೆ ನೀಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಲ್ಲಿಗೆ ಬಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮೀನುಗಾರರೊಂದಿಗೆ ಬೆರೆತು ಸ್ಪರ್ಧೆಗಳನ್ನ ಕಂಡು ಆನಂದಿಸಿದರು. ನಂತರ ಮೀನು ಹಿಡಿಯುವ ಸ್ಪರ್ಧೇಯಲ್ಲಿ ಸ್ವತಃ ದೋಣಿಯಲ್ಲಿ ತೆರಳಿ ಮೀನುಗಾರರಿಗೆ ಪ್ರೆರೇಪಣೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಿಆರ್ಝೆಡ್ ಹೆಸರಿನಲ್ಲಿ ಜಿಲ್ಲೆಯಲ್ಲಿ ಪ್ರವಾಸೋಧ್ಯಮಕ್ಕೆ ದಕ್ಕೆಯಾಗಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಸಮುದ್ರಕಿನಾರೆಗಳು ಪ್ರವಾಸೋದ್ಯಮದ ದೃಷಿಯಿಂದ ಬಹಳಷ್ಟು ಅಭಿವೃದ್ಧಿ ಕಾಣಬೇಕಾಗಿತ್ತು. ಸಿಆರ್ಝೆಡ್ ಹೆಸರಿನಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆಂದು ಬಂದ 2 ಕೋಟಿ ಅನುದಾನವನ್ನ ಜಿಲ್ಲಾಡಳಿತ ಬಳಸಿಕೊಳ್ಳದೆ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಬಂದಿರುವ ಹಣ ಸದ್ವೀನಿಯೋಗವಾಗಿಲ್ಲ. ಮೀನುಗಾರಿಕೆಗೆ ಸರ್ಕಾರದಿಂದ ನೀಡುತ್ತಿರುವ ಸವಲತ್ತುಗಳು ಕಡಿಮೆಯಾಗಿದೆ. ಈ ಕುರಿತು ಮೀನುಗಾರರು ಹೋರಾಟ ನಡೆಸಬೇಕಾಗುತ್ತದೆ. ಮೀನುಗಾರರ ಮೇಲಿನ ನಿರ್ಲಕ್ಷ್ಯದ ಧೋರಣೆ ಸರಿಯಲ್ಲ ನಿಮ್ಮ ನಿರ್ಲಕ್ಷ್ಯಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಒಂದೇಡೆ ಸಮುದ್ರ ಬೋರ್ಗರೆತವಾದರೆ ಇನ್ನೊಂದೆಡೆ ಮತ್ಸ ಸಂಗಮಕ್ಕೆ ಬಂದ ಸಾರ್ವಜನಿಕರ ಬೋರ್ಗರೆತ ಈ ಕಾರ್ಯಕ್ರಮವೆನ್ನುವುದು ಒಂದು ಯಶಸ್ವಿ ಕಾರ್ಯಕ್ರಮವಾಗಿದೆ. ದೇಶದ ಆರ್ಥಿಕ ವ್ಯವಸ್ಥೆಗೆ ಮೀನುಗಾರರ ಕೊಡುಗೆ ಮಹತ್ತರದ್ದಾಗಿದೆ. ಎಲ್ಲಾ ಉದ್ದಿಮೆಗಳು ವ್ಯವಹಾರ ಮಾಡುತ್ತಾರೆ ಆದರೆ ಮೀನುಗಾರಿಕೆ ಎನ್ನುವುದು ಬಹಳ ಸಾಹಸಮಯ ಕೆಲಸವಾಗಿದೆ. ಮೀನುಗಾರಿಕೆಗೆ ಬಿಎಸ್ವೈ ಮುಖ್ಯಮಂತ್ರಿಯಾಗಿದ್ದಾಗ ಬಹಳಷ್ಟು ಬಂದರುಗಳ ಅಭಿವೃದ್ಧಿ ಮಾಡಿದ್ದಾರೆ. ಮಲ್ಪೆಯ ಮೂರನೇ ಹಂತದ ಕಾಮಗಾರಿಗೆ ೫೦ಲಕ್ಷ ನಮ್ಮ ಸರ್ಕಾರವಿದ್ದಾಗ ಬಿಡುಗಡೆ ಮಾಡಿದ್ದೇವೆ. ಹೆಜಮಾಡಿಯ ಬಂದರು ಮಾಡುವ ಬಗ್ಗೆ ಬಹಳಷ್ಟು ಬೇಡಿಕೆ ಇದೆ. ಅದಕ್ಕೆ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡಿದೆ ಆದರೆ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವಾಗ ಈ ಅನುದಾನ ವಾಪಾಸಾಗಿದೆ ಎಂದರು. ಈ ಸಂದರ್ಭ ಮೀನುಗಾರಿಕೆಯಲ್ಲಿ ಬಹಳಷ್ಟು ವರ್ಷಗಳಿಂದ ಜೀವನ ಸವೆಸಿದ ಗುಲಾಬಿ, ನರಸಿಂಹ ಖಾರ್ವಿ, ಮಂಜು ನಾಯ್ಕ, ಸಾಕು ಶಂಕರ ಖಾರ್ವಿ, ಗುಜ್ಜಾಡಿ ಮಂಜು ನಾಯ್ಕಇವರನ್ನ ಸನ್ಮಾನಿಸಲಾಯಿತು. ಮತ್ಸಸಂಗಮ ಕಾರ್ಯಕ್ರಮದ ಉದ್ದೇಶದಿಂದ ನಡೆಸಲಾದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿ.ಪಂ ಅಧ್ಯಕ್ಷ ದಿನಕರ್ ಬಾಬು, ಮಂಗಳೂರು ಪ್ರಭಾರಿಯಾಗಿರುವ ಉದಯಕುಮಾರ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುಂದಾಪುರ ಕ್ಷೇತ್ರಾಧ್ಯಕರಾಗಿರುವ ಕಾಡೂರು ಸುರೇಶ್ ಶೆಟ್ಟಿ, ಶಂಕರ ಪೂಜಾರಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗವೀರ ಮತ್ತು ಉಡುಪಿ ತಾ.ಪಂ ಅಧ್ಯಕ್ಷೆ ನಳಿನಿ ಪ್ರದೀಪ್ರಾವ್ ಮೊದಲಾದವರು ಇದ್ದರು.