ಮಂಗಳೂರು, ಡಿ 25 (Daijiworld News/PY) : ಬಿ ಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯ ಅಥವಾ ಬಿಜೆಪಿ ಕಾರ್ಯಕರ್ತರ ಮುಖ್ಯಮಂತ್ರಿಯೇ? ಎಂದು ಶಾಸಕ ಯು.ಟಿ ಖಾದರ್ ಪ್ರಶ್ನಿಸಿದ್ಧಾರೆ.
ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಯು.ಟಿ.ಖಾದರ್, ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟವರ ಹೆಸರು ಎಫ್ ಐ ಆರ್ನಲ್ಲಿ ಉಲ್ಲೇಖಿಸಿದ್ದೇ ತಪ್ಪು, ಮೃತ ಕುಟುಂಬಕ್ಕೆ ಮೊನ್ನೆ ಪರಿಹಾರ ಘೋಷಿಸಿ ಈಗ ಪರಿಹಾರ ಕೊಡೋದಿಲ್ಲ ಎಂದು ಸಿ.ಎಂ ಹೇಳಿದ್ದಾರೆ. ಅವರ ಮಾತನ್ನೇ ಈಡೇರಿಸದ ಪರಿಸ್ಥಿತಿ ಮುಖ್ಯಮಂತ್ರಿಗೆ ಆಗುತ್ತಿದೆ ಎಂದು ಅನುಮಾನವಾಗುತ್ತಿದೆ ಎಂದು ಹೇಳಿದ್ದಾರೆ.
ಪರಿಹಾರ ಘೋಷಣೆ ಮಾಡುವಾಗ ಮುಖ್ಯಮಂತ್ರಿಗೆ ಸ್ಪಷ್ಟನೆ ಇರಲಿಲ್ಲವೇ, ಪರಿಹಾರ ನೀಡಲ್ಲ ಎನ್ನುವ ಹೇಳಿಕೆ ಸರಿಯಲ್ಲ ಇದು ಮಾನವೀಯತೆಯಿಲ್ಲದ ಸರ್ಕಾರ, ಇವರು ರಾಜ್ಯದ ಮುಖ್ಯಮಂತ್ರಿಯ ಅಥವಾ ಬಿಜೆಪಿ ಕಾರ್ಯಕರ್ತರ ಮುಖ್ಯಮಂತ್ರಿಯೇ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಮುಲ್ಕಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಕೊಡಲು ಬಂದಾಗ ಇಬ್ಬರ ಗೋಲಿಬಾರ್ ನಡೆದಿತ್ತು, ಆದರೆ ಆಗ ಅವರಿಗೆ ಸರ್ಕಾರ ಪರಿಹಾರ ಕೊಡಲಿಲ್ಲವೇ? ಸರ್ಕಾರದಲ್ಲಿ ಮುಖ್ಯಮಂತ್ರಿಯ ಮಾತುಗಳು ನಡೆಯುವುದಿಲ್ಲ, ಅವರ ಮಾತುಗಳನ್ನೇ ಈಡೇರಿಸದ ಸ್ಥಿತಿ ಮುಖ್ಯಮಂತ್ರಿಗೆ ಬಂದೊದಗಿದೆ ಎಂದು ತಿಳಿಸಿದ್ದಾರೆ.