ಮೂಡಬಿದಿರೆ, ಡಿ 25 (Daijiworld News/PY) : ''ಕಂಬಳ ಜನಪ್ರಿಯತೆ ಪಡೆದಿರುವುದು ಸಂತಸದ ವಿಚಾರ. ಕರಾವಳಿಯ ಜನತೆ ಶ್ರಮ ಜೀವಿಗಳಾಗಿದ್ದು ವಿಶ್ವದಲ್ಲೆಡೆ ನಮ್ಮ ಸಂಸ್ಕ್ರತಿ, ಭೂತಾರಾಧನೆ ನಡೆನುಡಿಗಳಿಂದ ಮನ್ನಣೆ ಪಡೆದಿದ್ದಾರೆ. 5 ಕೋಣದ ಯಜಮಾನರು ಕೋಣಗಳನ್ನು ಪ್ರೀತಿಯಿಂದ ಮಕ್ಕಳಂತೆ ಸಾಕುತ್ತಿದ್ದಾರೆ. ಸಾಂಪ್ರಾದಾಯಿಕ ಕಂಬಳ ಕ್ರೀಡೆಯನ್ನು ಉಳಿಸುವಲ್ಲಿ ರಾಜ್ಯ ಸರಕಾರ ಸದಾ ಬದ್ಧ'' ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ "ವೀರರಾಣಿ ಅಬ್ಬಕ್ಕ ಸಂಸ್ಕೃತಿ" ಗ್ರಾಮದಲ್ಲಿ ಬುಧವಾರ ನಡೆದ 17ನೇ ವರ್ಷದ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಬಯಲು ಕಂಬಳದಲ್ಲಿ "ಅಬ್ಬಕ್ಕ" ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ''ಕೋಣ ಸಾಕುವವರ ಪ್ರೀತಿಯೇ ಕಂಬಳ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಲು ಪ್ರಮುಖ ಕಾರಣ. ಕಂಬಳಕ್ಕೆ ಇನ್ನಷ್ಟು ಮೆರುಗು ಬರುವಂತೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಮೂಡುಬಿದಿರೆ ತಾಲೂಕು ಮಾದರಿ ತಾಲೂಕಾಗಿ ಅಭಿವೃದ್ಧಿಯನ್ನು ಹೊಂದಲು ಗರಿಷ್ಠ ಅನುದಾನವನ್ನು ಒದಗಿಸುವುದಾಗಿ ಭರವಸೆಯನ್ನು ನೀಡಿದ ಅವರು ವಿದೇಶಿಯರನ್ನು ಬೆನ್ನಟ್ಟಿದ ದೇಶದ ಮೊತ್ತ ಮೊದಲ ಹೋರಾಟಗಾರ್ತಿ ಅಬ್ಬಕ್ಕ. ಅವರ ಹೋರಾಟದ ಕಿಚ್ಚನ್ನು ಬಿಂಬಿಸುವ ಪ್ರತಿಮೆಯನ್ನು ಇಲ್ಲಿ ನಿರ್ಮಿಸಿರುವುದು ಉತ್ತಮ ಕೆಲಸ'' ಎಂದರು.