ಮಂಗಳೂರು, ಡಿ 26 (Daijiworld News/MSP): ಸೂರ್ಯಗ್ರಹಣವು ಇಂದು ಬೆಳಗ್ಗೆ 8:04ರಿಂದ ಆರಂಭಗೊಂಡಿದ್ದು, ಮಂಗಳೂರು ಸೇರಿದಂತೆ ವಿವಿಧೆಡೆ ಖಗೋಳಾಸಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮಸೂರ, ದೂರದರ್ಶಕ, ಸೌರ ಕನ್ನಡಕಗಳ ನೆರವಿನಿಂದ ಇದನ್ನು ವೀಕ್ಷಿಸಿದರು. ಮಂಗಳೂರಿನಲ್ಲಿ ಸುಮಾರು 9:24ರಿಂದ 9:25ರ ಅವಧಿಯಲ್ಲಿ ಕಂಕಣ ರೂಪದಲ್ಲಿ ಸೂರ್ಯ ಗ್ರಹಣ ಗೋಚರಿಸಿದೆ.
ಸೂರ್ಯಗ್ರಹಣದ ವೇಳೆ ನಗರದಲ್ಲಿ ಹೆಚ್ಚಿನ ಜನಸಂಚಾರವಿಲ್ಲದೇ ಬಿಕೋ ಅನ್ನುತ್ತಿತ್ತು, ಗ್ರಹಣದ ಭಯದಿಂದ ಹೆಚ್ಚಿನವರು ಮನೆಯಲ್ಲೇ ಉಳಿದುಕೊಂಡಿದ್ದರು. ಕಂಕಣ ಸೂರ್ಯಗ್ರಹಣ ಸಂಭವಿಸುತ್ತಿದ್ದಂತೆ ಹವಾಮಾನದಲ್ಲೂ ಬದಲಾವಣೆ ಕಂಡು ಬಂತು. ನೆರಳಿನ ಜತೆ ತಂಪಾದ ವಾತಾವರಣದಲ್ಲಿ ಖಗೋಳದ ಕೌತುಕ ವೀಕ್ಷಕರಿಗೆ ಮುದ ನೀಡಿತು. ಮಂಗಳೂರಿನಲ್ಲಿ ಶೇ.93ರಷ್ಟು ಪ್ರಮಾಣದಲ್ಲಿ ಕಂಕಣ ರೂಪ ಕಂಡುಬಂದಿದ್ದರೆ, ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ಇನ್ನಿ ಸೂರ್ಯಗ್ರಹಣ ಪ್ರಯುಕ್ತ ಮಂಗಳೂರಿನ ದೇವಾಲಯಗಳಲ್ಲಿ ದೇವರ ದರ್ಶನ ಹಾಗೂ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು., ಕದ್ರಿ ದೇವಸ್ಥಾನದಲ್ಲಿ ಭಜನೆ, ವಿಷ್ಣು ಸಹಸ್ರನಾಮ, ಗಣಪತಿ ಸ್ತೋತ್ರ, ರುದ್ರ ಪಠಣ ನಡೆಯಿತು. ಕಂಕಣ ಸೂರ್ಯಗ್ರಹಣದ ಹಿನ್ನಲೆಯಲ್ಲಿ ಬಹುತೇಕ ಮಸೀದಿಗಳಲ್ಲಿ ವಿಶೇಷ ನಮಾಝ್ ಮಾಡಲಾಯಿತು.