ಕುಂದಾಪುರ, ಡಿ 26 (Daijiworld News/MSP): ಬೈಕ್ನಲ್ಲಿ ತೆರಳುತ್ತಿದ್ದ ಬಾಬು ಶೆಟ್ಟಿಯನ್ನು ಹಾಡಹಗಲೇ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆಗೈದ ಘಟನೆ ನಡೆದು ಹತ್ತು ದಿನಗಳ ಬಳಿಕ ಇಂದು ಆರು ಆರೋಪಿಗಳನ್ನು ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಇದಕ್ಕೂ ಮುನ್ನ ಕುಂದಾಪುರ ಗ್ರಾಮಾತರ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಡಿ ಮಾತನಾಡಿದ ಎಎಸ್ಪಿ ಹರಿರಾಂ ಶಂಕರ್, ಬಾಬು ಶೆಟ್ಟಿ ಕೊಲೆ ಪ್ರಕರಣಕ್ಕೆ ವೈಯುಕ್ತಿಕ ದ್ವೇಷವೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಬಾಬು ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಾಬು ಶೆಟ್ಟಿಯ ಸಂಬಂಧಿಕ ತೇಜಪ್ಪ ಶೆಟ್ಟಿ (68) ಎಂದು ಗುರುತಿಸಲಾಗಿದ್ದು, ಆತನನ್ನು ಆರೋಪಿ ಒಂದು ಎಂದು ದಾಖಲಿಸಲಾಗಿದೆ. ಈ ಹಿಂದೆ ಹರೀಶ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿಗೆ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರಳಕಟ್ಟೆ ನಿವಾಸಿ ತೇಜಪ್ಪ ಶೆಟ್ಟಿ ಹಾಗೂ ಬಾಬು ಶೆಟ್ಟಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಬಾಬು ಶೆಟ್ಟಿಯನ್ನು ಕೊಲ್ಲಬೇಕು ಎಂದು ತೀರ್ಮಾನಿಸಿದ ತೇಜಪ್ಪ ಶೆಟ್ಟಿ, ಎರಡನೇ ಆರೋಪಿ ಶೆಟ್ರಕಟ್ಟೆ ನಿವಾಸಿ ಉದಯರಾಜ್ ಶೆಟ್ಟಿ(55) ಎಂಬಾತನ ಜೊತೆ ಸೇರಿ ಸಂಚು ರೂಪಿಸಿ, ಉಳಿದ ನಾಲ್ಕು ಜನ ಆರೋಪಿಗಳಾದ ಕೆಂಚನೂರು ನಿವಾಸಿ ರಮೇಶ್ ಪೂಜಾರಿ(25), ಆನಗಳ್ಳಿ ನಿವಾಸಿ ಪ್ರವೀಣ್ ಪೂಜಾರಿ(25), ಬಸ್ರೂರು ನಿವಾಸಿ ಸಚಿನ್ ಪೂಜಾರಿ(21) ಹಾಗೂ ಆನಗಳ್ಳಿ ನಿವಾಸಿ ರಾಘವೇಂದ್ರ ಪೂಜಾರಿ(೨೪) ಸಹಕಾರದಲ್ಲಿ ಕೊಲೆ ಕೃತ್ಯನಡೆಸಲಾಗಿದೆ ಎಂದು ಹೇಳಿದರು.
ಕಳೆದ ಹಲವು ರ್ಷಗಳಿಂದ ಬಾಬು ಶೆಟ್ಟಿ ಹಾಗೂ ತೇಜಪ್ಪ ಶೆಟ್ಟಿ ನಡುವೆ ಕಲಹಗಳು ನಡೆಯುತ್ತಲೇ ಇದ್ದವು, ಇತ್ತೀಚೆಗೆ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳೂ ನಡೆದಿದ್ದರಿಂದ ಬಾಬು ಶೆಟ್ಟಿ ಬದುಕುಳಿದರೆ ತೇಜಪ್ಪ ಶೆಟ್ಟಿ ಮತ್ತು ಅವರ ತಂಡಕ್ಕೆ ಸಮಸ್ಯೆ ಉಂಟಾಗುತ್ತದೆ ಎಂದು ಯೋಚಿಸಿ ಈ ಕೃತ್ಯ ನಡೆಸಿರುವುದಾಗಿ ತೇಜಪ್ಪ ಶೆಟ್ಟಿ ಬಾಯ್ಬಿಟ್ಟಿರುವುದಾಗಿ ಹರಿರಾಂ ಶಂಕರ್ ತಿಳಿಸಿದರು.