ಮಂಗಳೂರು, ಡಿ 26 (Daijiworld News/MSP): ನರೇಂದ್ರ ಮೋದಿಯವರ ಜೀವನಗಾಥೆಯನ್ನು ಯಕ್ಷಗಾನ ರೂಪದಲ್ಲಿ ಸವಿಯಬೇಕೆ, ಹಾಗಿದ್ದರೆ ಯಕ್ಷಗಾನ ಮತ್ತು ಮೋದಿ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದಿದೆ. ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಕಾಲ್ಪನಿಕ ಕಥಾಪ್ರಸಂಗವನ್ನು ಸವಿಯಬಹುದು.
ಸಾಮಾನ್ಯವಾಗಿ ಐತಿಹಾಸಿಕ ಘಟನೆ, ಪುರಾಣಕಥೆಗಳುಳ್ಳ ಪ್ರಸಂಗ ಯಕ್ಷಗಾನದಲ್ಲಿ ನೋಡಲು ಸಿಗುತ್ತದೆ. ಇದಕ್ಕೀಗ ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಯಶೋಗಾಥೆಯೂ ಸೇರ್ಪಡೆಯಾಗಲಿದೆ. ಈ ಮೂಲಕ ಯಕ್ಷರಂಗದ ಮೇಲೆಯೂ ನರೇಂದ್ರ ಮೋದಿ ವಿಜೃಂಭಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಮಂಗಳೂರಿನ ಟಿ.ವಿ ರಮಣ ಪೈ ಸಭಾಂಗಣದಲ್ಲಿ ಜನವರಿ 5 2020 ರ ಸಂಜೆ 6.30 ಕ್ಕೆ 'ನರೇಂದ್ರ ವಿಜಯ' ಎಂಬ ಯಕ್ಷಗಾನ ಕಥಾನಕ ಪ್ರದರ್ಶನಗೊಳ್ಳುವ ವಿನೂತನ ಕಾರ್ಯಕ್ರಮಕ್ಕೆ ನಾಂದಿ ಹಾಡಲಿದೆ.
ಈ ‘ನರೇಂದ್ರ ವಿಜಯ’ ಯಕ್ಷಗಾನ ಕಥಾಪ್ರಸಂಗವನ್ನು ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರೀ ಅವರು ಬರೆದಿದ್ದಾರೆ. ನರೇಂದ್ರ ಮೋದಿಯವರ ಬಾಲ್ಯ, ಜೀವನಶೈಲಿ, ರಾಜಕೀಯ ಹಿನ್ನೆಲೆ ಸೇರಿದಂತೆ ಅವರ ಬದುಕಿನ ಹಲವು ಘಟ್ಟಗಳು ಪ್ರಸ್ತಾಪವಾಗಿವೆ.
ಈ ಕಥಾಪ್ರಸಂಗದಲ್ಲಿ ಮುಮ್ಮೇಳದಲ್ಲಿ ಜ್ಯೋತಿ ಶಾಸ್ತ್ರಿ, ವರದ ಐತಾಳ್, ಮಯೂರಿ ಉಪದ್ಯಾಯ, ನಿರ್ಮಲ ಗೋಳಿಕೊಪ್ಪ, ಸವಿತಾ ಭಟ್, ಶಾರ್ವಣಿ ಭಟ್, ನಳಿನೀ ರಾವ್, ದಿಶಾ ಜೋಯಿಸ್, ಮಲ್ಲಿಕಾ ರಾಘವೇಂದ್ರ ಭಟ್, ಮುಂತಾದವರು ಪಾತ್ರಧಾರಿಗಳಾಗಿ ಹಾಗೂ ಹಿಮ್ಮೇಳದಲ್ಲಿ ನಾಗೇಶ ಕುಲಾಲ್ ನಾಗರಕೊಡಿಗೆ, ಮದ್ದಳೆದಲ್ಲಿ ಎನ್. ಜಿ.ಹೆಗ್ಡೆ, ಚೆಂಡೆಯಲ್ಲಿ ಕೃಷ್ಣಮೂರ್ತಿ, ವೇಷಭೂಷಣವನ್ನು ಎಂ.ಅರ್.ನಾಯಕ್ ಸಿದ್ದಾಪುರ ಅವರು ನಿರ್ವಹಿಸಲಿದ್ದಾರೆ.