ಮಂಗಳೂರು, ಡಿ 26 (Daijiworld News/PY) : 'ಮಂಗಳೂರು ಗಲಭೆಯಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ನೀಡುವ ಪರಿಹಾರ ವಾಪಾಸ್ ವಿಚಾರ ಘೋಷಣೆ ಮಾಡಿ ಹಿಂದೆ ಪಡೆದಿರುವುದನ್ನು ರಾಜ್ಯ ಸರ್ಕಾರ ಸರಿಪಡಿಸಲಿ' ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ಡಿ.26ರ ಗುರುವಾರ ನಡೆದ ಮಾಧ್ಯಗೋಷ್ಟಿಯಲ್ಲಿ ಮಾತನಾಡಿದ ಅವರು, 'ಮಂಗಳೂರಿನಲ್ಲಿ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಕುಟುಂಬದವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ 10 ಲಕ್ಷ ಪರಿಹಾರ ಘೋಷಿಸಿದ್ದರು, ಆದರೆ 2 ದಿನಗಳ ಬಳಿಕ ಪರಿಹಾರ ನೀಡಲಾಗುವುದಿಲ್ಲ ಎಂದಿದ್ದಾರೆ, ಯಾರ ಮಾತು ಕೇಳಿ ಪರಿಹಾರ ಘೋಷಣೆಯನ್ನು ಹಿಂಪಡೆದಿದ್ದಾರೆ, ಇದು ಮೃತರ ಕುಟುಂಬಕ್ಕೆ ಮಾಡಿದ ಅವಮಾನ' ಎಂದು ಹೇಳಿದ್ದಾರೆ.
'ಈ ಹಿಂದೆ ಮೂಲ್ಕಿಯಲ್ಲಿ ಗೋಲಿಬಾರ್ ಆದಾಗ ಪರಿಹಾರ ನೀಡಿದ್ದರು, ಆದರೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿಚಾರದಲ್ಲಿ ಯಾಕೆ ಸರ್ಕಾರ ಗೊಂದಲ ಉಂಟು ಮಾಡುತ್ತಿದೆ, ಇದರ ಉದ್ದೇಶ ಏನು, ಇಂತಹ ಘಟನೆ ಆಗಬಾರದು, ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನು ಸಭೆಗೆ ಕರೆದು ಧೈರ್ಯ ತುಂಬುವ ಕೆಲಸ ಮಾಡಬೇಕು' ಎಂದಿದ್ದಾರೆ.
'ಎನ್ಆರ್ಸಿ ಅನುಷ್ಟಾನ ಆಗುವುದಕ್ಕೆ ನಾವು ಬಿಡುವುದಿಲ್ಲ, ಬಿಜೆಪಿ ಅಧಿಕಾರ ಇರುವ ರಾಜ್ಯದಲ್ಲೂ ಎನ್ಆರ್ಸಿ ಗೆ ಒಪ್ಪಿಗೆ ಇಲ್ಲ, ಪರಿಹಾರ ನೀಡುದಿಲ್ಲ ಅಂತ ಹೇಳಿದ ಸಿಎಂ ಕ್ಷಮೆ ಕೇಳಬೇಕು, ಹಿಂದೆ ಚರ್ಚ್ ದಾಳಿ ಆದಾಗಲೂ ಬಿಜೆಪಿ ಸರಕಾರ ಆಡಳಿತ ಇತ್ತು, ಸುಪ್ರೀಂ ಕೊರ್ಟ್ ಜಡ್ಜ್ ಮೂಲಕ ನ್ಯಾಯಾಂಗ ತನಿಖೆಯಾಗಲಿ' ಎಂದು ಖಾದರ್ ಹೇಳಿದ್ದಾರೆ.
'ಸಿಟಿ ರವಿ ಚಿಕ್ಕಮಗಳೂರಿನವರು ಇಲ್ಲಿಗೆ ಬಂದು ಬಾಯಿಗೆ ಬಂದ ಹಾಗೆ ಮಾತನಾಡುವುದು ಬೇಡ, ನಮ್ಮ ಜಿಲ್ಲೆಯನ್ನು ದಯವಿಟ್ಟು ಹಾಗೆ ಬಿಟ್ಟು ಬಿಡಿರಾಜ್ಯದ ಇತರ ಜಿಲ್ಲೆಯವರು ಮಾತನಾಡುವುದು ಬೇಕಿಲ್ಲ' ಎಂದಿದ್ದಾರೆ.