ಮೂಡಬಿದಿರೆ, ಡಿ.26 (Daijiworld News/PY) : ಮೂಡಬಿದಿರೆ ಸಮೀಪದ ಪುತ್ತಿಗೆಯ ಎನಿಕ್ರಿಪಲ್ಲದ ಬಾವಿಯೊಂದರಲ್ಲಿ ಯುವಕನ ಮೃತದೇಹ ಗುರುವಾರ ಪತ್ತೆಯಾಗಿದೆ.
ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ರೋಹಿತ್ ದೇವಾಡಿಗ(25) ಎಂದು ಗುರುತಿಸಲಾಗಿದೆ.
ಮೃತರಾದ ರೋಹಿತ್ ಬುಧವಾರ ಒಂಟಿಕಟ್ಟೆಯಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ರೋಹಿತ್ ಅವರ ಮೃತದೇಹ ಒಂಟಿಕಟ್ಟೆಯಿಂದ ಸುಮಾರು ಮುಕ್ಕಾಲು ಕಿ.ಮೀ ದೂರದಲ್ಲಿನ ಎನಿಕ್ರಿಪಲ್ಲ ಎಂಬಲ್ಲಿರುವ ಆವರಣದ ಬಾವಿಯಲ್ಲಿ ಪತ್ತೆಯಾಗಿದ್ದು, ಮೃತದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ ಎಂದು ತಿಳಿದು ಬಂದಿದೆ.
ಮೃತ ರೋಹಿತ್ ಅವರು ವಾದ್ಯ ಕಲಾವಿದರಾಗಿದ್ದರು ಎನ್ನಲಾಗಿದೆ.
ಘಟನೆಯ ಬಗ್ಗೆ ಮೃತನ ಸಹೋದರ ನಿಶ್ಚಿತ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.