ಬಂಟ್ವಾಳ, ಡಿ 27 (Daijiworld News/MB) : ಯಾವುದೇ ಅನುಮತಿ ಪಡೆಯದೆ ಧ್ವನಿವರ್ಧಕವನ್ನು ಬಳಸಿಕೊಂಡು ಕೈಕಂಬ ಬಳಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ 30 ಜನ ಸಿಎಫ್ಐ, ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಮೇಲೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಾಂದರ್ಬಿಕ ಚಿತ್ರ
ಗುರುವಾರ ರಾತ್ರಿ ಸುಮಾರು 7 ಗಂಟೆಗೆ 30 ಜನರು ಕೈಕಂಬದಲ್ಲಿ ಬಾವುಟ ಹಿಡಿದು ಧ್ವನಿವರ್ಧಕ ಬಳಿಸಿಕೊಂಡು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ಪ್ರತಿಭಟನಕಾರರಲ್ಲಿ ಪ್ರತಿಭಟನೆ ನಡೆಸದಂತೆ ತಿಳಿಸಿದ್ದು ಪ್ರತಿಭಟನಕಾರರು ಇದಕ್ಕೆ ಕಿವಿಗೊಡದೆ ಅಲ್ಲಿಯೇ ನೆರೆದಿದ್ದಾರೆ. ಈ ವೇಳೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಕಾನೂನು ಉಲ್ಲಂಘನೆಯ ಕುರಿತು ತಿಳಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದಾಗ ಪ್ರತಿಭಟನಕಾರರು ಸ್ಥಳದಿಂದ ಚದುರಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರತಿಭಟನೆಯು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಅಧ್ಯಕ್ಷ ಫಾಹದ್ ಪರ್ಲಿಯಾ, ಎಸ್ ಡಿ ಪಿ ಐನ ಇಸಾಕ್ ಶಾಂತಿ ಅಂಗಡಿ, ನೌಶೀರ್ ಯಾನೆ ನೌಚಿ, ಮೂಡ ಗ್ರಾಮ ನಿವಾಸಿ ಅಶ್ರಫ್ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಈ ಕುರಿತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ವಾರದ ಹಿಂದೆ ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ ನಡೆದಿದ್ದು ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.