ಮಂಗಳೂರು, ಡಿ 27 (Daijiworld News/PY) : ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪರಿಷ್ಕೃತ ಪಟ್ಟಿ ಪ್ರಕಟವಾಗಿದೆ.
ಮೀಸಲಾತಿ ಪರಿಷ್ಕರಣೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬುಧವಾರ ಸಹಿ ಹಾಕಿದ್ದು, ಗುರುವಾರ ನಗರಾಭಿವೃದ್ಧಿ ಇಲಾಖೆಯಿಂದ ಅಧಿಸೂಚನೆ ಪ್ರಕಟಗೊಂಡಿದೆ. ನೂತನ ಪಟ್ಟಿಯಲ್ಲಿ ಮಹಾಪೌರ ಹುದ್ದೆಯು ’ಸಾಮಾನ್ಯ’ ವರ್ಗಕ್ಕೆ ಮೀಸಲಾಗಿದ್ದು ಪ್ರಕಾರ ಮೀಸಲಾತಿಯಂತೆ ಮೇಯರ್ ಹುದ್ದೆಗೆ ಬಿಜೆಪಿಯ ಹಿರಿಯ ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ ಅವರ ಹೆಸರು ಮುಂಚೂಣಿಯಲ್ಲಿದ್ದು, ಉಳಿದಂತೆ ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ ಪಾಂಡೇಶ್ವರ, ಸಹಿತ ಹಲವರ ಹೆಸರುಗಳು ಕೇಳಿಬರುತ್ತಿವೆ.
ಆದರೆ, ಮೇಯರ್ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಪ್ರೇಮಾನಂದ ಶೆಟ್ಟಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಹಾಗೂ ಪಾಲಿಕೆಯ ಹಿರಿಯ ಸದಸ್ಯರಾಗಿರುವ ಕಾರಣ ಇವರೇ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಅಂತಿಮವಾಗಿದೆ ಎಂದು ತಿಳಿದುಬಂದಿದೆ. ಇನ್ನು ಉಪಮೇಯರ್ ಸ್ಥಾನವು ’ಸಾಮಾನ್ಯ’ ಮಹಿಳೆಗೆ ಮೀಸಲಾಗಿರುವ ಕಾರಣ, ಬಿಜೆಪಿಯಿಂದ ರೇಸ್ನಲ್ಲಿರುವ ಹೆಸರುಗಳು ಕೇಳಿಬರುತ್ತಿವೆ.
ಕಾರ್ಪೋರೇಟರ್ಗಳ ಗಜೆಟ್, ನೋಟಿಫಿಕೇಶನ್, ಮೇಯರ್ ಮೀಸಲಾತಿಯ ನೋಟಿಫಿಕೇಶನ್, ಆದ ತಕ್ಷಣ ಅದರ ಪ್ರತಿ ಪಾಲಿಕೆ ಆಯುಕ್ತರಿಗೆ ಬರಲಿದ್ದು, ಇದನ್ನು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮನಪಾ ಆಯುಕ್ತರು ಕಳುಹಿಸಿ ಮೇಯರ್ ಚುನಾವಣೆ ನಡೆಸಿಕೊಡುವಂತೆ ಮನವಿ ಮಾಡಲಿದ್ದಾರೆ. ಇದರಂತೆ 15 ದಿನಗಳ ಒಳಗೆ ಮೇಯರ್ ಚುನಾವಣೆ ನಿಗದಿ ಮಾಡುವಂತೆ ಮೈಸೂರು ಪ್ರಾದೇಶಿಕ ಆಯುಕ್ತರು ಪಾಲಿಕೆ ಆಯುಕ್ತರಿಗೆ ಸೂಚಿಸಲಿದ್ದಾರೆ.
ಪಾಲಿಕೆ ಪ್ರಮಾಣವಚನ ಹಾಗೂ ಮೇಯರ್ ಚುನಾವಣೆಗೆ ದಿನಾಂಕ ಪ್ರಕಟಿಸಲಾಗುತ್ತದೆ. ಪ್ರಸ್ತುತ ಬೆಳವಣಿಗೆಯ ಪ್ರಕಾರ ಜನವರಿ ಎರಡನೇ ವಾರದಲ್ಲಿ ಈ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.