ಮಂಗಳೂರು, ಡಿ 27(Daijiworld News/PY) : "ಮಂಗಳೂರು ಗೋಲಿಬಾರ್ ವೇಳೆ ಮೃತಪಟ್ಟ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿ ವಾಪಾಸ್ ಪಡೆದದ್ದು ಬಿಜೆಪಿ ಸರ್ಕಾರ ತೆಗೆದುಕೊಂಡ ಕೆಟ್ಟ ನಿರ್ಧಾರ, ಟಾರ್ಗೆಟ್ ನಡೆಸಿ ಘೋಷಿಸಿದ ಪರಿಹಾರವನ್ನು ವಾಪಾಸ್ ತೆಗೆದುಕೊಂಡಿದ್ದಾರೆ" ಎಂದು ಮಂಗಳೂರಿನಲ್ಲಿ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾತಾನಾಡಿದ ಸಸಿಕಾಂತ್ ಸೆಂಥಿಲ್ ಅವರು, "ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣವು ಬೇಸರ ತಂದಿದೆ, ದೇಶದ ಈಗಿನ ವಾತಾವರಣ ಸರಿಯಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಸಿಎಎ ಮತ್ತು ಎನ್ಆರ್ಸಿ ಜಾರಿಯಿಂದಾಗಿ ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ, ಕಾಯ್ದೆಗಳ ಜಾರಿಗೆಯಿಂದಾಗಿ ದೇಶ ವಿಭಜನೆಯಾಗುತ್ತಿದೆ, ಜಾರಿಗೆ ಬಂದಂತಹ ಈ ಕಾಯ್ದೆಗಳು ದೇಶಕ್ಕೆ ಅವಶ್ಯಕತೆಯಿರಲಿಲ್ಲ, ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆಗಳು ಬಡವರಿಗೆ ವಿರುದ್ಧವಾಗಿವೆ" ಎಂದು ತಿಳಿಸಿದ್ದಾರೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತಿದೆ, ಇಂತಹ ಸಂದರ್ಭದಲ್ಲಿ ನಾನು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ಸರಿ ಎನಿಸುತ್ತಿಲ್ಲ ಎಂದು ಹೇಳಿ ಸಸಿಕಾಂತ್ ಸೆಂಥಿಲ್ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜೀನಾಮೆ ಕೊಟ್ಟಿದ್ದರು.