ಕಾರ್ಕಳ, ಡಿ 27 (Daijiworld News/MSP): ಅಧಿಕಾರ ವಿಕೇಂದ್ರೀಕರಣ ಗಟ್ಟಿಯಾಗಬೇಕು. ಗ್ರಾಮ ಪಂಚಾಯತ್ಗಳು ಸರಕಾರದಂತೆ ಕೆಲಸ ಕಾರ್ಯ ನಿರ್ವಹಿಸಬೇಕು. ಅಧಿಕಾರ ವಿಕೇಂದ್ರೀಕರಣದಲ್ಲಿ ತಡೆ ಹಿಡಿದಿರುವ ಕೆಲ ಯೋಜನೆಗಳಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 6,000 ಮಂದಿಗೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಗೊಂಡಿಲ್ಲ ಎಂಬ ಗೊಂದಲ ಹಾಗೂ ಸ್ಥಳೀಯಾಡಳಿತ ಜನ ಪ್ರತಿನಿಧಿಗಳ ವೇತನ, ಗೌರವ ಧನ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಅದಕ್ಕೆ ಉಡುಪಿ ಜಿಲ್ಲೆಯಿಂದಲೇ ಮಹೂರ್ತ ಕೂಡಿ ಬರಲಿದೆ ಎಂಬ ವಿಶ್ವಾಸವನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವ್ಯಕ್ತಪಡಿಸಿದರು.
ಕುಕ್ಕುಂದೂರು ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನಾ ದಿನದಂದು ಭೇಟಿ ನೀಡಿ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಧ್ಯಮ ಪ್ರತಿನಿಧಿಯೊಂದಿಗೆ ಅವರು ಮಾತನಾಡಿ ಮೇಲಿನ ವಿಚಾರವನ್ನು ಪ್ರಸ್ತಾಪಿಸಿದರು.
ಪಂಚಾಯತ್ ವ್ಯವಸ್ಥೆಯ ಬಗ್ಗೆ ಆಸಕ್ತಿ ಇರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರತಿನಿಧಿಗಳಿಗೆ ಕೋಟಾದ ಹೊಳಪುನಲ್ಲಿ ಡಿಸೆಂಬರ್ 28 ರಂದು ಕೋಟಾದ ಹೊಳಪುನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. 388 ಗ್ರಾಮ ಪಂಚಾಯತ್ಗಳ, ೮ ತಾಲೂಕು ಪಂಚಾಯತ್ಗಳ, 2 ಜಿಲ್ಲಾ ಪಂಚಾಯತ್ಗಳ, ನಗರಾಢಳಿತದ ಸದಸ್ಯರುಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, 8 ಮಂದಿ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೀಡಿದರು.
ಕುಕ್ಕುಂದೂರು ಗ್ರಾಮ ಪಂಚಾಯತ್ನ ಅಧ್ಯಕ್ಷ ರಾಜೇಶ್ ರಾವ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಲೆಕ್ಕ ಸಹಾಯಕಿ ಸುರೇಖಾ ಬಿ, ಆನಂಧ ಬಂಡಿಮಠ, ಸಂತೋಷ್ರಾವ್, ಗ್ರಾಮ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.