ಮಂಗಳೂರು, ಡಿ 27 (DaijiworldNews/SM): ಭೂ ಸ್ವಾಧೀನ ಪರಿಹಾರ ವಿತರಣೆ ಸಂದರ್ಭದಲ್ಲಿ ಮಹಿಳೆಯ ಕೈಯಿಂದ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಭೂಸ್ವಾಧೀನ ಅಧಿಕಾರಿ ಸೇರಿದಂತೆ ಮೂವರ ಜಾಮೀನು ಅರ್ಜಿ ವಜಾಗೊಂಡಿದೆ.
ಕೆ.ಐ.ಎ.ಡಿ.ಬಿ.ಯ ವಿಷೇಶ ಭೂಸ್ವಾದೀನ ಅಧಿಕಾರಿ ದಾಸೇ ಗೌಡ, ಮೇನೇಜರ್ ಚಂದ್ರಶೇಕರ್ ಮತ್ತು ಮಧ್ಯವರ್ತಿ ದೀಪಕ್ ಪೆರ್ಮುದೆ ಎಂಬವರು ಆರೋಪಿಗಳಾಗಿದ್ದು, ಇವರು ಪರಿಹಾರ ವಿತರಣೆ ಸಂದರ್ಭ ಕಮಿಷನ್ ಪಡೆದಿದ್ದರು.
ಪ್ರಸ್ತುತ ಗೋವಾ ನಿವಾಸಿ ಮೇರಿ ಜಾರ್ಜ್ ರವರಿಂದ ಅವರ ತಾಯಿಯ ಭೂಸ್ವಾದೀನ ಬಾಬ್ತು ಬರಬೇಕಿದ್ದ ಪರಿಹಾರದ ಮೊತ್ತದಲ್ಲಿ 3% ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೂ ಹಣವನ್ನು ಮಧ್ಯವರ್ತಿ ದೀಪಕ್ ಪೆರ್ಮುದೆ ಮುಖಾಂತರ ಚೆಕ್ ನಲ್ಲಿ ಸ್ವೀಕರಿಸಿದ್ದರು. ಈ ಬಗ್ಗೆ ಮಹಿಳೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಡಿ. ವೈ.ಎಸ್.ಪಿ. ಭರತೇಶ್ ರೆಡ್ಡಿ ಮತ್ತು ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದರು. ಆರೋಪಿಗಳ ಕಛೇರಿಯಲ್ಲಿ ಲೆಕ್ಕಾಚಾರವಿಲ್ಲದ ದೊಡ್ಡ ಮೊತ್ತವನ್ನು ವಶಪಡಿಸಿಕೊಂಡಿದ್ದರು.
ಇನ್ನು ಆರೋಪಿಗಳು ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಮಂಗಳೂರು ಕೆ.ಐ.ಎ.ಡಿ.ಬಿ. ಯ ವಿಷೇಶ ಭೂಸ್ವಾದೀನ ಅಧಿಕಾರಿ ದಾಸೇ ಗೌಡ, ಮೇನೇಜರ್ ಚಂದ್ರಶೇಕರ್ ಮತ್ತು ಮಧ್ಯವರ್ತಿ ದೀಪಕ್ ಪೆರ್ಮುದೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈಯವರು ವಜಾಗೊಳಿಸಿ ಆದೇಶಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲರಾದ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ಆರೋಪಿಗಳ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರಾದ ಮುರಳೀಧರ ಪೈಯವರು ಡಿಸೆಂಬರ್ 27ರಂದು ಮೂವರೂ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.