Karavali
10ನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ಉದ್ಘಾಟನೆ
- Sat, Dec 28 2019 04:11:40 PM
-
ಕುಂದಾಪುರ ,ಡಿ 28(Daijiworld News/PY) : "ಹಣ ಆಸ್ತಿ, ಸಂಪತ್ತನ್ನು ಬಯಸದೇ ಶಿಕ್ಷಣ, ಧಾರ್ಮಿಕ ಮೌಲ್ಯ, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಬ್ರಾಹ್ಮಣ ಸಮುದಾಯ ಮಹತ್ವದ ಕೊಡುಗೆ ಕೊಡುತ್ತಿದೆ. ಕೇಂದ್ರ ಸರ್ಕಾರ ಈ ಸಮಾಜಕ್ಕೆ ಶೇ.10 ಮೀಸಲಾತಿಯನ್ನು ನೀಡಿದ್ದು, ಅದನ್ನು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅನುಷ್ಠಾನ ಮಾಡಿರುವ ವರದಿ ತರಿಸಿಕೊಂಡು ಕರ್ನಾಟಕದಲ್ಲಿಯೂ ಅನುಷ್ಟಾನ ಮಾಡಲಾಗುವುದು. ಮಹಾಸಭೆಯ ನಿವೇಶನದಲ್ಲಿ ಸಭಾಭವನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 5 ಕೋಟಿ ಅನುದಾನ ಬಿಡುಗಡೆಗೊಳಿಸುವುದಾಗಿ" ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಿ.,ಇವರ ನೇತೃತ್ವದಲ್ಲಿ ಕೋಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆದ 10ನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಮ್ಮೇಳನ-2019ರಲ್ಲಿ ತುಳಿಸಿ ಗಿಡಕ್ಕೆ ಗಂಗಾಜಲ ಎರೆಯುವ ಮೂಲಕ ಉದ್ಘಾಟಿಸಿ, ಸ್ಮರಣ ಸಂಚಿಕೆ ಭಾರ್ಗವ ಜ್ಯೋತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಧರ್ಮ ಸಂಸ್ಕಾರ ಆಚಾರ ವಿಚಾರ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ, ನಾಡಿನಲ್ಲಿ ರಾಷ್ಟ್ರಧರ್ಮವನ್ನು ನಿರಂತರವಾಗಿ ಪಸರಿಸುವ ಕಾರ್ಯ ಈ ಸಮಾಜ ಮಾಡುತ್ತಿದೆ. ಹಿಂದೂ ಧರ್ಮದಲ್ಲಿ ಧಾರ್ಮಿಕ ಆಚರಣೆಯಿಂದ ತೊಡಗಿ, ಎಲ್ಲ ವರ್ಗದವರಿಗೂ ಧಾರ್ಮಿಕತೆಯ ಅರಿವು ಮೂಡಿಸುವಲ್ಲಿ ಬ್ರಾಹ್ಮಣ ಸಮಾಜ ಶ್ರಮಿಸಿದೆ. ರಾಷ್ಟ್ರ ನಿರ್ಮಾಣದಲ್ಲಿಯೂ ಬ್ರಾಹ್ಮಣ ಸಮಾಜದ ಪಾತ್ರ ದೊಡ್ಡದಿದೆ. ಈ ಸಮಾಜ ಇನ್ನಷ್ಟು ಅಭಿವೃದ್ದಿ ಹೊಂದುವಲ್ಲಿ ಅಭಿವೃದ್ದಿ ಮಂಡಳಿ ರಚನೆಯಾಗಿದೆ. ಸಮಾಜದ ಬೇಡಿಕೆಗಳ ಈಡೇರಿಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬೆಳಗಾವಿಯಲ್ಲಿ ನಡೆದ ೯ನೇ ಸಮ್ಮೇಳನಕ್ಕಿಂತಲೂ ಉತ್ತಮ ರೀತಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, "ಇತರ ಸಮಾಜಗಳಿಗೆ ಮಾರ್ಗದರ್ಶನ ನೀಡುವಲ್ಲಿ, ಧಾರ್ಮಿಕ, ರಾಷ್ಟ್ರಪ್ರೇಮದಲ್ಲಿ ಬ್ರಾಹ್ಮಣ ಸಮಾಜ ಮುಂದಿದೆ. ಬ್ರಾಹ್ಮಣ ಸಮಾಜಕ್ಕೆ ಸರ್ಕಾರ ಮಟ್ಟದಿಂದ ಸಿಗುವ ಸವಲತ್ತುಗಳು ಸಕಾದಲ್ಲಿ ಸಿಗಬೇಕು. ಬ್ರಾಹ್ಮಣ ಎನ್ನುವ ಪ್ರಮಾಣ ಪತ್ರ ನೀಡುವುದಾಗಲಿ, ಶೇ.10ರ ಮೀಸಲಾತಿ ನೀಡುವುದಾಗಲಿ ರಾಜ್ಯ ಸರ್ಕಾರ ಈಡೇರಿಸಬೇಕು. ಇವತ್ತು ಬಹುಸಂಖ್ಯಾತರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. 79% ಶೇಕಡಾವಷ್ಟೆ ಹಿಂದುಗಳು ಇವತ್ತು ದೇಶದಲ್ಲಿದ್ದಾರೆ. ಹೀಗೆ ಏಕೆ ಆಗುತ್ತಿದೆ ಎನ್ನುವುದನ್ನು ನಾವು ಆಲೋಚಿಸಬೇಕಾಗಿದೆ. ಪ್ರತಿಜಿಲ್ಲೆಗಳಿಂದಲೂ ಜನ ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಪ್ರತಿ ಜಿಲ್ಲೆಗಳಲ್ಲಿಯೂ ಐಟಿ ಪಾರ್ಕಗಳ ಸ್ಥಾಪನೆಯಾಗಬೇಕು ಎಂದ ಅವರು, ದೇವಸ್ಥಾನ, ಮಠ, ಮಂದಿರಗಳಿಗೆ ರಾಜಕೀಯ ಇಲ್ಲ. ಎಲ್ಲ ರಾಜಕೀಯ ಪಕ್ಷದವರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಹಿಂದಿನ ಸರ್ಕಾರಗಳು ಧಾರ್ಮಿಕ ಸ್ಥಳಗಳಿಗೆ ನೀಡುವ ಅನುದಾನ ತಡೆ ಹಿಡಿದಿತ್ತು. ಅದನ್ನು ಮರಳಿ ಕೊಡುವ ಕೆಲಸ ಆಗಬೇಕು. ಮೇಲುಕೋಟೆಯಲ್ಲಿ ತಾಳೆಗರಿಗಳನ್ನು ಅವತ್ತು ಮೈಸೂರು ವಿಶ್ವವಿದ್ಯಾಲಯದ ವಶಕ್ಕೆ ನೀಡಲಾಗಿತ್ತು. ತಾಳೆಗರಿ ಅತ್ಯಮೂಲ್ಯವಾದ ಕೊಡುಗೆಗಳು. ಇದತ ಜೋಪಾನ ಆಧ್ಯ ಕರ್ತವ್ಯ. ಮೈಸೂರು ವಿವಿ ಸುಪರ್ದಿಯಲ್ಲಿರುವ ತಾಳೆಗರಿ ಸಂಗ್ರಹವನ್ನು ರಾಮಾನುಜ ಮಠಕ್ಕೆ ನೀಡಬೇಕು. ಅವರು ಅದರ ರಕ್ಷಣೆಗೆ ಸಿದ್ಧರಿದ್ದಾರೆ" ಎಂದರು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ.ಎನ್.ವೇಂಕಟನಾರಾಯಣ ಮಾತನಾಡಿ, "ಬ್ರಾಹ್ಮಣ ಅಭಿವೃದ್ದಿ ಮಂಡಳಿ ರಚನೆಯಾಗಿದೆ. ಪೂರ್ಣಾವಧಿಗೆ ಮಂಡಳಿ ರಚಿಸುವ ಕಾರ್ಯವಾಗಬೇಕು. ಕೇಂದ್ರ ಸರ್ಕಾರ ನೀಡಿರುವ ಶೇ.10 ಮೀಸಲಾತಿಯನ್ನು ರಾಜ್ಯದಲ್ಲಿಯೂ ಅನುಷ್ಟಾನಕ್ಕೆ ತರಬೇಕು, ರಾಜ್ಯದಲ್ಲಿ ಬ್ರಾಹ್ಮಣ ಜನಾಂಗಕ್ಕೆ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ, ಬ್ರಾಹ್ಮಣ ಪ್ರಮಾಣಪತ್ರ ನೀಡುವ ಕಾರ್ಯ ಆಗಬೇಕು"ಎಂದರು.
ಸಮ್ಮೇಳನಾಧ್ಯಕ್ಷರಾದ ನೇರಂಬಳ್ಳಿ ರಾಘವೇಂದ್ರ ರಾವ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಗೌರವಾಧ್ಯಕ್ಷ ಕೆ.ರಘುಪತಿ ಭಟ್, ಮೈಸೂರು ಶಾಸಕ ಎಸ್.ವಿ.ರಾಮದಾಸ, ಬೆಂಗಳೂರು ಬಸವನಗುಡಿ ಶಾಸಕ ಎಲ್.ವಿ.ರವಿ ಸುಬ್ರಹ್ಮಣ್ಯ, ಸಮ್ಮೇಳನದ ಪ್ರಧಾನ ಸಂಚಾಲಕರಾದ ಕೃಷ್ಣಮೂರ್ತಿ ಮಂಜರು, ಸಂಸದ ತೇಜಸ್ವಿ ಸೂರ್ಯ, ಸಮ್ಮೇಳನದ ಉಪಾಧ್ಯಕ್ಷರು, ಉದ್ಯಮಿಗಳಾದ ಯು.ಮಹೇಶ್ ಕಾರಂತ, ಸಮ್ಮೇಳನದ ಉಪಾಧ್ಯಕ್ಷ ರಘುನಾಥ ಸೋಮಯಾಜಿ, ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್., 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ, ಆರ್.ಎಸ್.ಎಸ್. ಮುಖಂಡರಾದ ಸು.ರಾಮಣ್ಣ, ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಸಚ್ಚಿದಾನಂದ, ರಶ್ಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮ್ಮೇಳನದ ಕಾರ್ಯಾಧ್ಯಕ್ಷರಾದ ಕೃಷ್ಣಾನಂದ ಚಾತ್ರ, ಮಹಾಸಭಾದ ಉಪಾಧ್ಯಕ್ಷರಾದ ಪ್ರಕಾಶ್ ಐಯ್ಯಂಗಾರ್, ಕೋಶಾಧಿಕಾರಿ ಕೆ.ಕೆ.ರಾಮಕೃಷ್ಣ, ಸಮ್ಮೇಳನದ ಕಾರ್ಯದರ್ಶಿ ಟಿ.ಕೆ.ಮಹಾಬಲೇಶ್ವರ ಭಟ್, ಸಮ್ಮೇಳನದ ಸಂಯೋಜಕ ಆರ್.ಲಕ್ಷ್ಮೀಕಾಂತ್, ಮಹಾಸಭಾದ ಪ್ರದಾನ ಕಾರ್ಯದರ್ಶಿ ಕೆ..ರಾಮಪ್ರಸಾದ್, ಮಹಾಸಭಾದ ಉಪಾಧ್ಯಕ್ಷ ಸಿ.ಕೆ ರಾಮಮೂರ್ತಿ,, ಸಮ್ಮೇಳನ ಸಂಚಾಲಕ ಗಣೇಶ ರಾವ್ ಉಪಸ್ಥಿತರಿದ್ದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಹೆಬ್ಬಾರ್ ಸ್ವಾಗತಿಸಿ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಪ್ರೊ|ಕೆ.ಇ.ರಾಧಾಕೃಷ್ಣ ಸ್ಮರಣ ಸಂಚಿಕೆಯ ಬಗ್ಗೆ ಮಾತನಾಡಿದರು. ನಟಿ, ನಿರೂಪಕಿ ಅಪರ್ಣಾ ಎನ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಾತಃಕಾಲ ವರೇಣ್ಯ ಗಾಯತ್ರಿ ಯಾಗ ಶಾಲೆಯಲ್ಲಿ ಗಾಯತ್ರಿ ಮಹಾಯಜ್ಞ ಆರಂಭಗೊಂಡಿತು. ಮಹಾಸಭಾದ ಧ್ವಜಾರೋಹಣವನ್ನು ಮಹಾಸಭಾಧ್ಯಕ್ಷ ಕೆ.ಎನ್.ವೇಂಕಟನಾರಾಯಣ ನೆರವೇರಿಸಿದರು. ಶ್ರೀ ಗಾಯತ್ರಿ ಮಹಾಯಜ್ಞದ ಪೂರ್ಣಾಹುತಿಯನ್ನು ವೇ.ಮೂ. ಶೃಂಗೇರಿಯ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇ.ಮೂ.ಬಿ.ಲೋಕೇಶ್ ಅಡಿಗ ಬಡಾಕೆರೆ ನೆರವೇರಿಸಿದರು. ಪ್ರಧಾನ ಆಚಾರ್ಯರಾಗಿ ಋಗ್ವೇದ ಸಲಕ್ಷಣ ಘನಪಾಠಿಗಳಾದ ವೇ.ಬ್ರ.ಲಕ್ಷ್ಮೀನಾರಾಯಣ ಭಟ್ ನಿರ್ವಹಿಸಿದರು. ಪ್ರಧಾನ ವೇದಿಕೆಯಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಆಶೀರ್ವಾದಗಳೊಂದಿಗೆ ತತ್ಕರಕಮಲ ಸಂಜಾತರಾದ ಜಗದ್ಗುರು ಶಂಕರರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿ, ಅನುಗ್ರಹ ಭಾಷಣ ಮಾಡಿದರು.
ಶಾಸಕ ಹಾಲಾಡಿ ಗೈರು :
ಕಾರ್ಯಕ್ರಮದಲ್ಲಿ ಹಲವಾರು ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಮುಖ್ಯವಾಗಿ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಗೈರು ಎದ್ದು ಕಾಣುತ್ತಿತ್ತು. ರಾಜ್ಯದ ಮುಖ್ಯಮಂತ್ರಿ ತನ್ನ ಕ್ಷೇತ್ರಕ್ಕೆ ಬಂದಿರುವಾಗ ಸ್ಥಳೀಯ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತು.