ಕೋಟ, ಡಿ 28(Daijiworld News/PY) : "ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಗುದ್ದಾಟ ಮಾಡುವ ಜನಪ್ರತಿನಿಧಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಕ್ಷಬೇಧ, ದೈನಂದಿನ ಜಂಜಾಟ ಮರೆತು ಒಂದಾಗುವುದಕ್ಕೆ ಹೊಳಪು ಕಾರ್ಯಕ್ರಮ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ಕಾರ್ಯ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಟ ಹೇಳಿದರು.
ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶನಿವಾರ ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಟಾನ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಸಾಂಸ್ಕ್ರತಿಕ ಸ್ಪರ್ಧೆಗಳ ಹೊಳಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಪಂಚಾಯತ್ರಾಜ್ ವ್ಯವಸ್ಥೆ ದೇಶದಲ್ಲಿ ಸದೃಢವಾಗಿ ಬೆಳೆದಿದೆ. ಇದನ್ನು ಬಲಪಡಿಸಲು ಸರ್ಕಾರ ಎಲ್ಲ ರೀತಿಯ ಗಮನ ನೀಡುತ್ತಿದೆ. ಗ್ರಾಮ ಮಟ್ಟದಲ್ಲಿ ಆಗುವ ಯೋಜನೆಗಳು ಸೂಕ್ತವಾಗಿ ಅನುಷ್ಟಾನಗೊಳ್ಳಬೇಕು, ಇದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ,ರಾಜಕೀಯ ಚುನಾವಣೆ ಸಮಯದಲ್ಲಿ ಮಾತ್ರ ಚುನಾವಣೆ ಮುಗಿದ ಮೇಲೆ ಊರಿನ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸ್ಪರ್ಧೆಯ ಕ್ರೀಡಾಳುಗಳ ಪಥಸಂಚಲನದ ಗೌರವ ಸ್ವೀಕರಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, "ರಾಜ್ಯದ ಪ್ರತಿಯೊಂದು ಗ್ರಾಮದ ಮನೆಯಲ್ಲೂ ಮುಂದಿನ ವರ್ಷದೊಳಗೆ ಶೌಚಾಲಯ ನಿರ್ಮಾಣ, ಪ್ರತಿ ಗ್ರಾಮ ಪಂಚಾಯಿತಿ ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ರೂ.20ಲಕ್ಷ ಅನುದಾನವನ್ನು ಬಳಸಿಕೊಂಡು ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡುವ ಮತ್ತು ರಾಜ್ಯದ 602 ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸುವ ಯೋಜನೆಗಳನ್ನು ಇಟ್ಟುಕೊಳ್ಳಲಾಗಿದೆ" ಎಂದು ಹೇಳಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಧ್ವಜವಂದನೆ ಸ್ವೀಕರಿಸಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಕ್ರೀಡಾಜ್ಯೋತಿ ಬೆಳಗಿಸಿದರು. ದ.ಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ತಿಂಗಳಾಯ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಉಡುಪಿ ದಕ್ಷಿಣಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣಕನ್ನಡ ಜಿಲ್ಲೆಗಳ ಒಟ್ಟು 388 ಗ್ರಾಮ ಪಂಚಾಯಿತಿ, 2 ಜಿಲ್ಲಾ ಪಂಚಾಯಿತಿ, 8 ತಾಲ್ಲೂಕು ಪಂಚಾಯಿತಿ, 1 ಮಹಾನಗರ ಪಾಲಿಕೆ, 15 ನಗರ ಸಭೆ ಪುರಸಭೆ ಹೀಗೆ ಒಟ್ಟು 9000ಸಾವಿರ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಉದ್ಯಮಿ ಆನಂದ್ ಸಿ ಕುಂದರ್ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಹೊಳಪು ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪನವರು ಪೂರ್ವಾಹ್ನ 9ಗೆ ಆಗಮಿಸಿ ಹೊಳಪು ಕಾರ್ಯಕ್ರಮದ ವಿಶೇಷತೆ ಹಾಗೂ ಪಥ ಸಂಚಲದ ಗೌರವ ಸ್ವೀಕರಿಸಿ ಸಭೆಯ ಕೊನೆಯವರೆಗೂ ಇದ್ದು ಜಿಲ್ಲಾಪಂಚಾಯತ್ ಹಾಗೂ ಸಿ.ಎಸ್ ಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.
ಆರತಿ ಬತ್ತಿಯಲ್ಲಿ ದೀಪ ಬೆಳಗಿಸಿಲ್ಲ!
ಆರತಿ ತಟ್ಟೆ ವಿಳಂಬ ಗಮನಿಸಿದ ಮುಖ್ಯಮಂತ್ರಿ ಬೆಂಕಿ ಕಡ್ಡಿಯಲ್ಲಿ ದೀಪ ಬೆಳಗಿಸಿ ಮಾತಿನ ಮಂಟಪಕ್ಕೆರಿದರು.ಅಲ್ಲೂ ಕೂಡಾ ಗ್ರಾಮ ಪಂಚಾಯತಿ ಪ್ರತಿನಿಧಿಗಳ ಅಭಿವೃದ್ಧಿ ವಿಚಾರವಾಗಿ ಮಾತನಾಡಲ್ಲಿಲ್ಲ ಬದಲಾಗಿ ತನ್ನಲ್ಲಿರುವ ಬರೆದುಕೊಂಡು ಬಂದ ಹಾಳೆಯನ್ನು ಓದಿ ನಿರ್ಗಮಿಸಿದರು.
ಸಚಿವ ಕೋಟ ಅಭಿನಂದನೆ ಸ್ವೀಕರಿಸಲಿಲ್ಲ :
ವೇದಿಕೆಯಿಂದ ಇಳಿಯುವಾಗ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿಗಳಲ್ಲಿ ಅಭಿನಂದಿಸುವ ಕುರಿತು ಹೇಳಿದಾಗ ಅದಕ್ಕೂ ಮುಖ್ಯಮಂತ್ರಿ ಮಣೆ ಹಾಕಲ್ಲಿಲ್ಲ ಪೂರ್ವನಿಯೊಜಿತ ಕಾರ್ಯಕ್ರಮಕ್ಕೆ ತೆರಳಿದರು
ಸಾಲು ಸಾಲು ವಾಹನ :
ಹೊಳಪು ಕಾರ್ಯಕ್ರಮಕ್ಕೆ ಆಗಮಿಸಿಸುವ ಪಂಚಾಯತ್ ಪ್ರತಿನಿಧಿಗಳ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕೋಟದ ಶಾಂಭವೀ ಶಾಲೆಯಲ್ಲಿ ಮಾಡಿತ್ತಾದರೂ ರಾಷ್ಟ್ರೀಯ ಹೆದ್ದಾರಿ ಎರಡು ಬದಿಯಲ್ಲಿ ಸಮಾರು 3ಕಿಮೀ ಉದ್ದಕ್ಕೂ ವಾಹನಗಳ ಸಾಲು ಎದ್ದು ಕಾಣುತ್ತಿತ್ತು.
ಪೊಲೀಸ್ ಸರ್ಪಗಾವಲು :
ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ ಆಗಮನದ ಹಿನ್ನಲ್ಲೆಯಲ್ಲಿ ರಸ್ತೆಯುದ್ದಕ್ಕೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಕಣ್ಮನ ರಂಗುಗೊಂಡ ಪಥಸಂಚಲನ :
ಹೊಳಪು ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ರಂಗೇರುತ್ತಿದ್ದು ಈ ಬಾರಿಯ ಹೊಳಪು ಮತ್ತಷ್ಟು ಹೊಳಪಿನೊಂದಿಗೆ ವಿಜೃಂಭಿಸಿಕೊಂಡಿತ್ತು. ಪ್ರತಿಯೊಂದು ಗ್ರಾಮಪಂಚಾಯತ್ ನವನವೀನ ಶೈಲಿಯಲ್ಲಿ ವಸ್ತ್ರಾಲಂಕಾರದಿಂದ ಪಥಸಂಚಲನದಲ್ಲಿ ಭಾಗಿಯಾಗಿದ್ದು, ವಿಶೇಷತೆಯಲ್ಲಿ ವಿಶೇಷವಾಗಿತ್ತು. ಅದರಲ್ಲೂ ಶೌಚಾಲಯ ಮುಕ್ತ ಗ್ರಾಮಪಂಚಾಯತ್, ಸ್ವಚ್ಛಭಾತರ ಪರಿಕಲ್ಪನೆ, ಸಾಂಸ್ಕೃತಿಕ ನಂಟು ಪಸರಿಸುವ ಕರಾವಳಿಯ ಗಂಡು ಕಲೆ ಯಕ್ಷಗಾನ, ಕಂಬಳ, ಭಾರತದ ಬಾಹ್ಯಾಕಾಶ ಹೀಗೆ ನಾನಾ ರೀತಿಯ ಪಂಚಾಯತ್ ಪ್ರತಿನಿಧಿಗಳ ವೇಷಭೂಷಣ ವಿಶೇಷವಾಗಿ ಆರ್ಕಷಿಸಿತು.