ಉಡುಪಿ, ಡಿ 28(Daijiworld News/PY) : ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ಚೇತರಿಕೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ, ಆದ್ದರಿಂದ ಶ್ರೀಗಳ ಆಸೆಯಂತೆ ನಾಳೆ ಅವರನ್ನು ಮಠಕ್ಕೆ ಸ್ಥಳಾಂತರಿಸುವುದಾಗಿ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕಿರಿಯ ಶ್ರೀಗಳು, ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ ಹೀಗಾಗಿ ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆಯನ್ನು ಮಠದಲ್ಲೇ ಮಾಡಲಾಗುತ್ತದೆ, ಶ್ರೀಗಳ ಅಂತಿಮ ಆಸೆಯಂತೆ ಶ್ರೀಗಳನ್ನು ನಾಳೆ ಮಠಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ.
ಆಸ್ಪತ್ರೆಯ ಕೆಲವು ಕಾರ್ಯ ಕಾರ್ಯವಿಧಾನಗಳು ಉಳಿದ ಕಾರಣ ತಯಾರಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದ ಸ್ಥಿತಿ ಗಂಭೀರವಾದ ಕಾರಣ ಪೇಜಾವರ ಮಠಕ್ಕೆ ಭಕ್ತರು ಭೇಟಿ ಕೊಡಬೇಡಿ, ಗುರುಗಳ ಆರೋಗ್ಯಕ್ಕಾಗಿ ನೀವಿರುವಲ್ಲಿಂದಲೇ ಪ್ರಾರ್ಥಿಸಿ, ಕೇಂದ್ರ ಸರ್ಕಾರದ ಪೂರ್ಣ ಸಹಕಾರ ದೊರಕುವ ನಂಬಿಕೆ ಇದೆ ಎಂದು ಹೇಳಿದ್ದಾರೆ.