ಉಡುಪಿ, ಡಿ 29 (Daijiworld News/MB) : ಪೇಜಾವರ ಅಧೋಕ್ಷಜ ಮಠದ 32ನೇ ಸ್ವಾಮೀಜಿಗಳಾದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ.
88 ವರ್ಷ ವಯಸ್ಸಿನ ವಿಶ್ವೇಶ್ವತೀರ್ಥ ಸ್ವಾಮೀಜಿಯವರು ಅನಾರೋಗ್ಯದ ಕಾರಣದಿಂದಾಗಿ 8 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿ ಆರೋಗ್ಯದಲ್ಲಿ ಚೇತರಿಕೆ ಆಗುವ ಯಾವುದೇ ಲಕ್ಷಣಗಳು ಕಾಣದ ಹಿನ್ನಲೆಯಲ್ಲಿ ಅವರನ್ನು ಉಡುಪಿಯ ಮಠಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಪೇಜಾವರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಕರೆ ಮಾಡಿ ಶ್ರೀಗಳ ಆರೋಗ್ಯವನ್ನು ವಿಚಾರಣೆ ಮಾಡಿದ್ದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ, ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಮಾಜಿ ಗೃಹಸಚಿವ ಎಂ.ಬಿ. ಪಾಟೀಲ್, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಗೋವಿಂದ ಕಾರಜೋಳ, ಶಾಸಕ ಜಮೀರ್ ಅಹಮ್ಮದ್, ಐವನ್ ಡಿಸೋಜಾ, ಯು.ಟಿ, ಖಾದರ್, ಆಸ್ಕರ್ ಫೆರ್ನಾಂಡೀಸ್, ಉದ್ಯಮಿ ನೀರಾ ರಾಡಿಯಾ, ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧಿಪತಿಗಳು, ರಾಜಕಾರಣಿಗಳು ಮತ್ತು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಶ್ರೀಗಳ ಅಂತಿಮ ಸಾರ್ವಜನಿಕ ದರ್ಶನಕ್ಕೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಆ ಬಳಿಕ ಮಧ್ಯಾಹ್ನ ಹೆಲಿಕಾಫ್ಟರ್ ಮೂಲಕ ಶ್ರೀಗಳ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿದ್ದು ಅಲ್ಲಿನ ಶ್ರೀ ನಗರದ ಸಮೀಪ ಇರುವ ವಿದ್ಯಾಪೀಠದಲ್ಲಿ ಶ್ರೀಗಳನ್ನು ಬೃಂದಾವರಸ್ಥರನ್ನಾಗಿಸಲಾಗುವುದು ಎಂದು ತಿಳಿದು ಬಂದಿದೆ.