ಉಡುಪಿ, ಡಿ 29 (Daijiworld News/MB) : 88 ರ ತನ್ನ ಇಳಿ ವಯಸ್ಸಿನಲ್ಲಿಯೂ ಸಮಾಜಮುಖಿ ಚಿಂತನೆಯೊಂದಿಗೆ ಚುರುಕಿನಲ್ಲಿದ್ದ ಉಡುಪಿ ಅಷ್ಟಮಠದ ಪೇಜಾವರ ಮಠದ ಯತಿ ಪರಂಪರೆಯಲ್ಲಿ 32ನೇ ಪೀಠಾಧಿಪತಿಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಇಂದು ವಿಧಿವಶರಾಗಿದ್ದಾರೆ.
1931ರ ಎ.27ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ರಾಮಕುಂಜದಲ್ಲಿ ನಾರಾಯಣ ಆಚಾರ್ಯ ಹಾಗೂ ಕಮಲಮ್ಮ ಎಂಬ ಸಾತ್ವಿಕ ದಂಪತಿಗಳಿಗೆ ಜನಿಸಿದ ಅವರ ಪೂರ್ವಾಶ್ರಮದ ಹೆಸರು ವೆಂಕಟರಮಣ.
ಅವರು 1938ರ ಡಿ.3 ರಂದು ತನ್ನ ಎಂಟನೇ ವಯಸ್ಸಿನಲ್ಲೇ ಹಂಪಿಯಲ್ಲಿ ಪೇಜಾವರ ಮಠದ ಅಂದಿನ ಯತಿಗಳಾದ ಶ್ರೀವಿದ್ಯಾಮಾನ್ಯ ತೀರ್ಥರಿಂದ ಸನ್ಯಾಸದೀಕ್ಷೆ ಪಡೆದಿದ್ದು ಅವರಿಗೆ ಶ್ರೀ ವಿಶ್ವೇಶ್ವತೀರ್ಥರೆಂದು ನಾಮಕರಣ ಮಾಡಲಾಯಿತು.
ಪ್ರಾಥಮಿಕ ಶಾಲೆಯನ್ನು ಸ್ಥಳೀಯ ರಾಮಕುಂಜದ ಸಂಸ್ಕ್ರತ ಎಲೆಮೆಂಟರಿ ಶಾಲೆಯಲ್ಲಿ ಕಲಿತಿದ್ದರು. ಏಳನೇ ವರ್ಷದಲ್ಲಿ ಗಾಯತ್ರಿ ಉಪದೇಶವೂ ಆಗಿತ್ತು.
ತನ್ನ ಆರನೇ ವಯಸ್ಸಿನಲ್ಲಿ ಉಡುಪಿಗೆ ಬಂದಿದ್ದು ಆ ಸಂದರ್ಭದಲ್ಲಿ ಉಡುಪಿಯಲ್ಲಿ ಉಡುಪಿಯಲ್ಲಿ ಪೇಜಾವರ ಮಠದ ಪರ್ಯಾಯ ನಡೆಯುತ್ತಿತ್ತು. ಪೇಜಾವರ ಮಠದ ಸ್ವಾಮಿಗಳಾಗಿದ್ದ ಶ್ರೀ ವಿಶ್ವಮಾನ್ಯ ತೀರ್ಥರು ಈ ಪುಟ್ಟ ಬಾಲಕನನ್ನು ನೋಡಿ "ನೀನು ನನ್ನಂತೆ ಸ್ವಾಮಿಯಾಗುತ್ತೀಯಾ? ಎಂದು ಕೇಳಿದ್ದರು.
ಹೀಗೆ ಹಂಪೆಗೆ ತಲುಪಿದ ಶ್ರೀ ವಿಶ್ವಮಾನ್ಯ ತೀರ್ಥರು ತನ್ನ ನಿರ್ಧಾರ ಕೈಗೊಂಡು ರಾಮಕುಂಜಕ್ಕೆ ಕರೆ ಕಳುಹಿಸಿ ಆಗ ತಾನೇ ಉಪವಿತನಾಗಿದ್ದ ವಟು ವೆಂಕಟರಮಣನ್ನು ಹಂಪೆಗೆ ಕರೆಯಿಸಿಕೊಂಡರು.
ಮುಂದೆ 1938 ಡಿಸೆಂಬರ್ ಮೂರರಂದು ವಟು ವೆಂಕಟರಮಣನಿಗೆ ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಯತಿ ದೀಕ್ಷೆ ನೀಡಲಾಯಿತು.
ಹೀಗೆ ವೆಂಕಟರಮಣನೆಂಬ ಬಾಲಕ ಪೇಜಾವರ ಅಧೋಕ್ಷಜ ಮಠದ 32ನೇ ಯತಿಯಾಗಿ 'ವಿಶ್ವೇಶತೀರ್ಥ'ನೆಂಬ ನಾಮದಿಂದ ಮಧ್ವ ಪೀಠವನ್ನೇರಿದರು.