ಮಂಗಳೂರು, ಜ 24: ನಗರದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮದನ್ ಖಾಕಿಗೆ ವಿದಾಯ ಹೇಳಿ ರಾಜಕೀಯ ಪ್ರಚಾರಕ್ಕೆ ಇಳಿದಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿ ಜೊತೆ ಮಾತನಾಡಿದ ಅವರು, ರಾಜಕೀಯ ಪ್ರವೇಶಿಸುವುದು ನನ್ನ ಕನಸಾಗಿತ್ತು. ನೂರಾರು ಕನಸುಗಳನ್ನು ಹೊತ್ತುಕೊಂಡು ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ರಾಜಕೀಯದಲ್ಲಿ ಬದಲಾವಣೆ ತರುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.
ಮದನ್ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಚುನಾವಣೆಯ ಪ್ರಚಾರವನ್ನು ಆರಂಭಿಸಿದ್ದಾರೆ. ಯುವಜನತೆಯ ಮನಸ್ಸು ಗೆದ್ದಿರುವ ಮದನ್ ಅವರಿಗೆ ಯುವ ಸಮುದಾಯದ ಸಂಪೂರ್ಣ ಬೆಂಬಲ ಎಲ್ಲೆಡೆ ವ್ಯಕ್ತವಾಗಿದೆ. ಇದೀಗ ಮದನ್ ಅವರ ರಾಜಕೀಯ ಪ್ರವೇಶವನ್ನು ಯುವ ಸಮುದಾಯ ಸ್ವಾಗತಿಸಿದ್ದು, ಮದನ್ ಪರ ಪ್ರಚಾರ ಆರಂಭಿಸಿದೆ.
ಮದನ್ ಅವರ ವೃತ್ತಿ ಬದುಕು ಆರಂಭವಾಗಿದ್ದು ಮಂಗಳೂರಿನಲ್ಲಿ. ಆದರೆ ಮೂಲತಃ ಇವರು ಕೊಡಗಿನವರು. ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಇವರು ನಂತರ ಬಂದರು ಹಾಗು ಬಜಪೆ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದರು. ವೃತ್ತಿಗೆ ಯಾವುದೇ ಚ್ಯುತಿ ಬರದಂತೆ ಕೆಲಸ ಮಾಡುತ್ತಿದ್ದ ಮದನ್ ಮೇಲೆ ಎಲ್ಲರಿಗೂ ಅಪಾರವಾದ ಪ್ರೀತಿ ಇತ್ತು.