ಬಂಟ್ವಾಳ, ಡಿ 30 (DaijiworldNews/SM): ಪೌರತ್ವಕ್ಕೂ ಧರ್ಮಕ್ಕೂ ಸಂಬಂಧವಿಲ್ಲವೆಂದು ಸಂವಿಧಾನ ಹೇಳುತ್ತಿದೆಯಾದರೂ, ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದಿಂದ ಕೇಂದ್ರ ಸರಕಾರವು ದೇಶದ ಬಹುತ್ವದ ನಾಶಕ್ಕೆ ಹೆಜ್ಜೆಯನ್ನಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು ಇದರ ವಿರುದ್ದ ಒಕ್ಕೊರಲ ಹೋರಾಟ ಅನಿವಾರ್ಯ ಎಂದು ಪ್ರಗತಿಪರ ಚಿಂತಕ, ಪತ್ರಕರ್ತ ಶಶಿಧರ್ ಭಟ್ ಹೇಳಿದ್ದಾರೆ.
ಎನ್ ಆರ್ ಸಿ, ಸಿಎಎ ಮತ್ತು ಎನ್ ಪಿ ಆರ್ ವಿರೋಧ ಹೋರಾಟ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಸೋಮವಾರ ಆಯೋಜಿಸಲಾದ ಬೃಹತ್ ಪ್ರತಿಭಟನಾ ಸಭೆಯಲ್ಲಿಅವರು ಮಾತನಾಡಿದರು. ಬಿ.ಜೆ.ಪಿ. ಹಾಗೂ ಸಂಘಪರಿವಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು, ದೇಶ ಪ್ರೇಮ ಯಾರಪ್ಪನ ಮನೆಯ ಸೊತ್ತೂ ಅಲ್ಲ. ಆದ್ರೆ ಇತಿಹಾಸವನ್ನು ತಿರುಚುವ ಮೂಲಕ ಜನರಲ್ಲಿ ಭ್ರಮೆಯನ್ನು ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದವರು ಟೀಕಿಸಿದರು.
ಬ್ರಿಟೀಷರ ಏಜೆಂಟರಂತೆ ಕೆಲಸ ಮಾಡಿದ್ದಕ್ಕೆ ಟಿಪ್ಪು ಕೆಲವರನ್ನು ಕೊಂದ, ಆದರೆ ಹಿಂದೂಗಳನ್ನು ಕೊಂದ ಎಂಬ ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಮುಸ್ಲಿಮರು ಸೇರಿದಂತೆ ಜಾತಿ ವ್ಯವಸ್ಥೆಯಲ್ಲಿ ಕೆಳಗಿರುವವರನ್ನು ನಾಶ ಮಾಡುವ ಉದ್ದೇಶದಿಂದ ಇಂತಹ ಕಾನೂನನ್ನು ಜಾರಿ ತರುತ್ತಿದ್ದು, ಇತಿಹಾಸವನ್ನು ತಿರುಚುವ ಕಾರ್ಯದಲ್ಲಿ ಕಾಂಗ್ರೆಸ್ನ ಪಾಲೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದವರು ಆರೋಪಿಸಿದರು.
ನಾವೇ ಆಯ್ಕೆ ಮಾಡಿ ಕಳುಹಿಸಿದವರು ಈಗ ನೀವು ಯಾರು ಎಂದು ಕೇಳಿ ಪೌರತ್ವ ಸಾಭೀತು ಪಡಿಸಲು ಹೇಳುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ಬಹುತೇಕ ಮಾಧ್ಯಮಗಳು ಸಂಘಪರಿವಾರದ ಬುಲೆಟಿನ್ ಗಳಂತಿವೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರಕಾರ, ಪ್ರಧಾನಿ ಅವರನ್ನು ಟೀಕಿಸಿದರೆ, ದೇಶದ ಆರ್ಥಿಕ ವ್ಯವಸ್ಥೆಯ ಕುರಿತು ಮಾತನಾಡಿದರೆ ಅಂತವರಿಗೆ ದೇಶದ್ರೋಹ ಪಟ್ಟ ನೀಡಲಾಗುತ್ತಿದೆ. ನಾವು ಎಂದಿಗೂ ತಾಳ್ಮೆ ಕಳೆದುಕೊಳ್ಳದೆ ಹೋರಾಟ ನಡೆಸಿದರೆ ಖಂಡಿತವಾಗಿಯೂ ಜಯ ನಮ್ಮದಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಮುಹಮ್ಮದ್ ಶಾಫಿ ಅವರು ಪ್ರಸ್ತಾವನೆಗೈದು ಮಾತನಾಡಿ, ಸಂಘಪರಿವಾರದ ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದರು. ನಮ್ಮ ಹಿನ್ನೆಲೆಯ ಯಾವುದೇ ಪುರಾವೆಗಳನ್ನು ನಮ್ಮ ಬಳಿ ಕೇಳಬಾರದು, ನಾವು ಕೊಡುವುದೂ ಇಲ್ಲ. ಭಾರತ ಇದು ನಮ್ಮ ದೇಶ. ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು, ಸಂಘಪರಿವಾರದವರನ್ನು ದೇಶದಿಂದ ಹೊರಗೆ ಕಳುಹಿಸುತ್ತೇವೆ ಎಂದು ಆವೇಶದಿಂದ ನುಡಿದರು.