ಬೈಂದೂರು, ಡಿ 30 (DaijiworldNews/SM): ರಾಜಕೀಯ ಲಾಭಕ್ಕಾಗಿ ಹಿಂದೂಗಳು ಹಾಗೂ ಮುಸ್ಲಿಂಮರನ್ನು ಒಡೆದು ಆಳುವ ನೀತಿಯನ್ನು ಚುನಾವಣಾ ಪೂರ್ವವೇ ಬಿಜೆಪಿ ಪಕ್ಷ ಪರೋಕ್ಷವಾಗಿ ತಿಳಿಸಿರುವುದನ್ನು ಕೇಂದ್ರ ಸರಕಾರ ಇಂದು ಸಿಎಬಿ ಹಾಗೂ ಎನ್ಆರ್ಸಿ ಕಾಯಿದೆಗಳ ಮೂಲಕ ಮುನ್ನೆಲೆಗೆ ತಂದು ಇದು ಕೇವಲ ಮುಸ್ಲಿಂರ ಸಮಸ್ಯೆಗೆ ಎಂದು ಬಿಂಬಿಸಿ ಹಿಂದೂ ವೋಟ್ಬ್ಯಾಂಕ್ ಭದ್ರಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದೆ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.
ಅವರು ಸೋಮವಾರ ಶಿರೂರು ಗ್ರಾಮ ಪಂಚಾಯತ್ ಎದುರು ಶಿರೂರು ಸಿಎಎ ಮತ್ತು ಎನ್ಆರ್ಸಿ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಸಿಎಬಿ ಹಾಗೂ ಎನ್ಆರ್ಸಿಯಿಂದ ಕೇವಲ ಮುಸ್ಲಿಂಮರಿಗಷ್ಟೇ ಸಮಸ್ಯೆ ಎಂದು ಭಾವಿಸಿರುವುದು ತಪ್ಪು. ದೇಶದಲ್ಲಿ ವಾಸಿಸುತ್ತಿರುವ ಬಡವರು, ಹಿಂದುಳಿವರು, ಆದಿವಾಸಿಗಳಿಗಳಿಗೆ ಪೌರತ್ವ ಸಾಬೀತುಪಡಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇರುವಾಗ ಬೇರೆ ದೇಶದಿಂದ ಬಂದವರಿಗೆ ಪೌರತ್ವ ನೀಡುವುದು ಹೇಳಿದಷ್ಟು ಸರಳವೇ ಎಂದು ಪ್ರಶ್ನಿಸಿದ ಇದು ಜನಸಾಮಾನ್ಯರು ಹಾಗೂ ಆಳು ಶ್ರೀಮಂತರ ಹಿತಾಸಕ್ತಿ ಕಾಯುತ್ತಿರುವ ಸರಕಾರದ ನಡುವಿನ ಸಂಘರ್ಷ ಎಂದರು.
ಬಿಡ್ಜಿ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಎಸ್.ಡಿ.ಪಿ.ಐ. ದ.ಕ ಜಿಲ್ಲಾ ಕಾರ್ಯದರ್ಶಿಯಾಗಿ ಇಕ್ಬಾಲ್ ಬೆಳ್ಳಾರೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಸಿಪಿಐಎಂ ಬೈಂದೂರಿನ ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.