ಮಂಗಳೂರು, ಡಿ 31 (Daijiworld News/MB) : ಮೂರು ವರ್ಷಗಳ ಹಿಂದೆ ನಗರದ ಸಬ್ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳನ್ನು ಭೇಟಿ ಮಾಡುವ ನೆಪದಲ್ಲಿ ಅವರಿಗೆ ಗಾಂಜಾ ಪೂರೈಸಲು ಯತ್ನಿಸಿದ್ದ ಕಸ್ಬಾ ಬೆಂಗ್ರೆಯ ಅಶ್ಫಕ್ (24) ಎಂಬಾತನಿಗೆ ಮಂಗಳೂರಿನ 3ನೇ ಜೆಎಂಎಫ್ಸಿ ನ್ಯಾಯಾಲಯವು 6 ತಿಂಗಳ ಕಠಿಣ ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿದೆ.
ಅಶ್ಫಕ್ 2016ರ ಎಪ್ರಿಲ್ 4ರಂದು ಬೆಳಗ್ಗೆ 10 ಗಂಟೆಗೆ ಜೈಲಿನಲ್ಲಿದ್ದ ನಹೀಂ ಮತ್ತು ಚಪ್ಪೆ ತಣ್ಣಿ ರಹೀಂ ಅವರನ್ನು ಭೇಟಿಯಾಗಲು ಬಂದಿದ್ದ. ಈ ಸಂದರ್ಭ ಜೈಲಿನ ಹೊರಗಿದ್ದ ಬರ್ಕೆ ಠಾಣೆಯ ಎಎಸ್ಐ ಅಮ್ಮಣ್ಣಿ ಮತ್ತು ಸಿಬ್ಬಂದಿ ತಪಾಸಣೆ ನಡೆಸಿದಾಗ ಅಶ್ಫಕ್ನಲ್ಲಿ 50 ಗ್ರಾಂ ತೂಕದ ಗಾಂಜಾ ಪತ್ತೆಯಾಗಿತ್ತು ಎಂದು ಆರೋಪ ಮಾಡಲಾಗಿತ್ತು. ಆಗಿನ ಬರ್ಕೆ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಎ.ಕೆ. ರಾಜೇಶ್ ಅವರು ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 3ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಶ್ವಿನಿ ಕೋರೆ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಡಿ. 26ರಂದು ತೀರ್ಪು ನೀಡಿದರು.
ಸರಕಾರದ ಪರವಾ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ. ಮೋಹನ್ ಕುಮಾರ್ ವಾದಿಸಿದ್ದು, 8 ಸಾಕ್ಷಿದಾರರ ಪೈಕಿ ಐವರನ್ನು ವಿಚಾರಣೆಗೆ ಮಾಡಲಾಗಿತ್ತು.
ಅಪರಾಧಿಗೆ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8 ಸಿ ಅನ್ವಯ 6 ತಿಂಗಳು ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ತಿಂಗಳ ಸಾದಾ ಶಿಕ್ಷೆ ಮತ್ತು ಐಪಿಸಿ 424 (ನಿಷೇಧಿತ ವಸ್ತು ಸಾಗಾಟ) ಅನ್ವಯ 6 ತಿಂಗಳ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ತಿಂಗಳ ಸಾದಾ ಸಜೆಯನ್ನು ವಿಧಿಸಲಾಗಿದೆ.