ಮಂಗಳೂರು, ಡಿ 31 (Daijiworld News/PY) : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಜ.4ರಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಹಾಗೂ ಜ.12ರಂದು ಬಿಜೆಪಿ ವತಿಯಿಂದ ನಡೆಸಲು ನಿರ್ಧರಿಸಿದ್ದ ಜನಜಾಗೃತಿ ಸಮಾವೇಶವನ್ನು ಮುಂದೂಡುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯ್ ತಿಳಿಸಿದ್ದಾರೆ.
"ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ಮುಖ್ಯ. ಈ ಉದ್ದೇಶದಿಂದ ಕೆಲವು ದಿನಗಳ ಕಾಲ ಯಾವುದೇ ಪ್ರತಿಭಟನೆ, ಸಮಾವೇಶ ನಡೆಸದೇ ಇರುವುದು ಉತ್ತಮ, ಪರಿಸ್ಥಿತಿ ಹತೋಟಿಗೆ ಬಂದ ಬಳಿಕ ಪ್ರತಿಭಟನೆ, ಸಮಾವೇಶ ನಡೆಸಿದರೆ ಉತ್ತಮ" ಎಂದು ತಿಳಿಸಿದ್ದಾರೆ.
"ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಅಸಹಕಾರ ಚಳುವಳಿ ಹೆಸರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಹಾಗೂ ಬಿಜೆಪಿ ನಡೆಸಲು ನಿರ್ಧರಿಸಿದ ಜನಜಾಗೃತಿ ಸಮಾವೇಶವನ್ನು 10 ದಿನಗಳ ಕಾಲ ಮುಂದೂಡುವಂತೆ ಮನವಿ ಮಾಡಿದ್ದೇನೆ, ಇದಕ್ಕೆ ಎರಡು ಕಡೆಯ ಮುಖಂಡರೂ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ" ಎಂದು ತಿಳಿಸಿದರು.
ಇನ್ನು ಗೋಲಿಬಾರ್ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, "ಗೋಲಿಬಾರ್ನಲ್ಲಿ ಮೃತಪಟ್ಟ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರವನ್ನು ರದ್ದು ಮಾಡಿಲ್ಲ, ಬದಲಾಗಿ ತಡೆಹಿಡಿಯಲಾಗಿದೆ. ಗೋಲಿಬಾರ್ ವಿಚಾರವಾಗಿ ನಡೆಯುತ್ತಿರುವ ತನಿಖಾ ವರದಿ ಬಂದ ಬಳಿಕ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
"ಗೋಲಿಬಾರ್ ಬಗ್ಗೆ ಈಗಾಗಲೇ ಮ್ಯಾಜಿಸ್ಟೀರಿಯಲ್ ವಿಚಾರಣೆ ಪ್ರಾರಂಭವಾಗಿದೆ, ಗುಂಡೇಟಿನಿಂದ ಇಬ್ಬರು ಮೃತಪಟ್ಟಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗುವುದು, ಈ ಸಂಬಂಧ ಸಿಐಡಿ ಡಿಜಿಪಿಗೆ ಸೂಚನೆ ನೀಡಿದ್ದು, ಅವರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್ ಅಂಗಾರ, ಯು.ಟಿ. ಖಾದರ್, ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಸಂಜೀವ ಮಠಂದೂರು, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಐವನ್ ಡಿಸೋಜ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್, ಮಾಜಿ ಶಾಸಕರಾದ ಬಿ.ಎ.ಮೊಹಿಯುದ್ದೀನ್ ಬಾವಾ, ಜೆ.ಆರ್.ಲೋಬೋ ಪಾಲ್ಗೊಂಡಿದ್ದರು.