ಬೆಂಗಳೂರು, ಜ 24: ಸಿದ್ದಗಂಗಾ ಮಠಾಧೀಶ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ನಡೆದಾಡುವ ದೇವರು ಎಂದೇ ಖ್ಯಾತಿಯಾಗಿರುವ ತುಮಕೂರು ಸಿದ್ದಗಂಗಾ ಶ್ರೀಗಳ ಹೆಸರು ದೇಶದ ಅತ್ಯುನ್ನತ ಪುರಸ್ಕಾರಕ್ಕೆ ಪ್ರಸ್ತಾಪವಾಗಿದೆ. ಭಾರತ ರತ್ನ ಪ್ರಶಸ್ತಿಯ ಆಯ್ಕೆಗಾಗಿ ರಚನೆಗೊಂಡಿರುವ ಉನ್ನತ ಮಟ್ಟದ ಸಮಿತಿ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರು ಪ್ರಸ್ತಾಪ ಮಾಡಿದೆ. ದೇಶದ ಅನೇಕ ಸಾಧಕರ ಹೆಸರು ಈ ಪಟ್ಟಿಯಲ್ಲಿದ್ದು, ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ನೀಡುವುದು ಬಹುತೇಕ ಖಚಿತವಾಗಿದೆ.
ಡಾ ಶಿವಕುಮಾರಸ್ವಾಮಿಗಳ ತ್ರಿವಿಧ ದಾಸೋಹ, ಸಾಮಾಜಿಕ ಕಾರ್ಯಗಳು, ಸಮಾಜ ಸುಧಾರಣೆಯ ಕ್ರಮಗಳ ಬಗ್ಗೆ ಸಮಿತಿ ಸಭೆಯಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಶಿವಕುಮಾರ ಸ್ವಾಮಿಗಳ ಸಾಮಾಜಿಕ ಕಾರ್ಯಗಳ ಹಿನ್ನಲೆಯಲ್ಲಿ ಭಾರತರತ್ನ ನೀಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.