ಮುಲ್ಕಿ, ಜ 24: ಚುನಾವಣಾ ಆಯೋಗದ ಸೂಚನೆ ಪ್ರಕಾರ ವರ್ಗಾವಣೆ ನಡೆಯುತ್ತಿದ್ದು, ಡಾ. ಬಿ.ಆರ್ ರವಿಕಾಂತೇ ಗೌಡ ದಕ್ಷಿಣ ಕನ್ನಡ ಜಿಲ್ಲೆಗೆ ಬರುವುದು ಖಚಿತ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗ ವಹಿಸಲು ಕರ್ನಿರೆಗೆ ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಿಂದ ಎಸ್ಪಿ ರವಿಕಾಂತೇ ಗೌಡ ಜಿಲ್ಲೆಗೆ ಬರಲಿದ್ದಾರೆ. ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನಿಷ್ಠಾವಂತ ಅಧಿಕಾರಿ. ಹಾಗಾಗಿಯೇ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಚುನಾವಣಾ ಆಯೋಗದ ಸೂಚನೆ ಪ್ರಕಾರ ವರ್ಗಾವಣೆ ನಡೆಯುತ್ತಿದ್ದು, ಇದು ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಅಪರಾಧದಲ್ಲಿ ದೇಶದಲ್ಲಿಯೇ ಹತ್ತನೇ ಸ್ಥಾನ ಹೊಂದಿದೆ. ಬಿಜೆಪಿ ಆಡಳಿತ ಅವಧಿಯಲ್ಲಿ ಶೇ 6 ರಷ್ಟಿದ್ದ ಅಪರಾಧ ಪ್ರಮಾಣ ಈಗ ಶೇ 5 ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಬಂದ್ ವಿಷಯವಾಗಿ ಮಾತನಾಡಿದ ಅವರು, ಬಂದ್ ವಿಚಾರದಲ್ಲಿ ಕಾಂಗ್ರೆಸ್ ಕೈವಾಡ ಇಲ್ಲ. ರೈತರು ದಿನ ನಿಗದಿಪಡಿಸಿ ಬಂದ್ ಕರೆ ನೀಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾತ್ರವಿಲ್ಲ ಎಂದು ಹೇಳಿದ್ದಾರೆ.