ಉಡುಪಿ, ಜ 01 (DaijiworldNews/SM) : ನಾಟಕೀಯ ಬೆಳವಣಿಗೆ ಎಂಬಂತೆ ಉಡುಪಿ ಜಿಲ್ಲೆಗೆ ಒಂದೇ ದಿನ ಇಬ್ಬರು ಪೊಲೀಸ್ ಆಯುಕ್ತರನ್ನು ನೇಮಕಗೊಳಿಸಲಾಗಿದೆ. ಇದೀಗ ನೂತನ ಎಸ್ಪಿಯಾಗಿ ಎನ್.ವಿಷ್ಣುವರ್ಧನ್ ಅವರನ್ನು ನೇಮಕಗೊಳಿಸಲಾಗಿದೆ.
ಎನ್.ವಿಷ್ಣುವರ್ಧನ್ ಬೆಂಗಳೂರು ಆಡಳಿತ ವಿಭಾಗದ ಉಪ ಆಯುಕ್ತರಾಗಿದ್ದರು. ಎನ್.ವಿಷ್ಣುವರ್ಧನ್ ಅವರನ್ನು ಉಡುಪಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸರಕಾರ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.
ಇನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷರರಾಗಿದ್ದ ಅಕ್ಷಯ್ ಅವರನ್ನು ಉಡುಪಿ ಜಿಲ್ಲೆಯ ಎಸ್ಪಿಯಾಗಿ ಮಂಗಳವಾರ ಸರಕಾರ ಆದೇಶ ಮಾಡಿತ್ತು. ಅದರಂತೆ ಬುಧವಾರ ಮಧ್ಯಾಹ್ನ ತನಕ ಅವರು ಕಚೇರಿಯಲ್ಲಿದ್ದರು. ಇದೀಗ ಮತ್ತೆ ಎಸ್ಪಿಯವರನ್ನು ಬದಲಾಯಿಸಲಾಗಿದೆ.
ಇನ್ನು ಈ ಹಿಂದೆ ಎಸ್ಪಿಯಾಗಿದ್ದ ನಿಶಾ ಜೇಮ್ಸ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.
ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿರುವ ಎನ್.ವಿಷ್ಣುವರ್ಧನ್ ಅವರು ಈ ಹಿಂದೆ 2016ರಲ್ಲಿ ಉಡುಪಿಯ ಎಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.
ನಿಶಾ ಜೇಮ್ಸ್ ಅವರು 2018ರ ಫೆಬ್ರವರಿ 23ರಂದು ಉಡುಪಿ ಎಸ್ಪಿಯಾಗಿದ್ದು ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ ಅಬ್ಬಕ್ಕ ಪಡೆಯನ್ನು ರಚಿಸಿದ್ದಾರೆ.
ಹಾಗೆಯೇ ಕಾರ್ಕಳ ಉಪ ವಿಭಾಗದ ಪೊಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ್ ಅವರನ್ನು ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಜಿ.ಕೆ.ಮಿಥುನ್ ಕುಮಾರ್ ಅವರನ್ನು ಉಡುಪಿ ಜಿಲ್ಲಾ ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕರಾಗಿ ನಿಯುಕ್ತಿಗೊಳಿಸಿ ಆದೇಶ ನೀಡಲಾಗಿದೆ.