ಮಂಗಳೂರು, ಜ02 (Daijiworld News/MSP): ವಿದೇಶದಲ್ಲಿದ್ದುಕೊಂಡು ಹಿಂಸೆಗೆ ಗಲಭೆಗೆ ಪ್ರೋತ್ಸಾಹ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂಸೆಗೆ ಪ್ರಚೋದಿಸಿ ಸಂದೇಶಗಳನ್ನು ಹಾಕಿ ವೈರಲ್ ಮಾಡಿದವರ ವಿರುದ್ದ ಪೊಲೀಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಡಿ ಇಟ್ಟಿದೆ.
ಡಿಸೆಂಬರ್ 19ರಂದು ಗೋಲಿಬಾರ್ಗೂ ಮುನ್ನ ಹಾಗೂ ನಂತರ ಹಿಂಸೆಗೆ ಕಾರಣರಾಗಿರುವಂತ ಪ್ರಚೋದನಾತ್ಮಕ ಟೆಕ್ಟ್ಸ್ ಮೆಸೇಜ್, ವಾಯ್ಸ್ ಮೆಸೇಜ್ ಮುಂತಾದ ಸಂದೇಶಗಳನ್ನು ಹರಿಯಬಿಟ್ಟವರಲ್ಲಿ ಹೆಚ್ಚಿನವರು ವಿದೇಶದಲ್ಲಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ದವೂ ಕಠಿಣ ಕಾನೂನು ಕ್ರಮಕ್ಕೆ ಇಲಾಖೆ ಸಿದ್ದತೆ ನಡೆಸಿಕೊಂಡಿದ್ದು ಇದಕ್ಕಾಗಿ ಎಲ್ಲ ಆರೋಪಿಗಳ ಪಾಸ್ಪೋರ್ಟ್ ರದ್ದತಿಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ.
ಪೌರತ್ವತಿದ್ದುಪಡಿ ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನೀಡಿರುವವರು, ಗಲಭೆ ಮತ್ತು ಗೋಲಿಬಾರ್ ನಂತರ ಪೊಲೀಸರ ವಿರುದ್ಧ ಪ್ರತೀಕಾರಕ್ಕೆ ಮುಂದಾಗುವಂತೆ ಪ್ರಚೋದಿಸಿ ಪೋಸ್ಟ್ ಹರಿಯಬಿಟ್ಟವರಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ವಿದೇಶದಲ್ಲಿದ್ದಾರೆ. ಇವರ ವಿರುದ್ದ ಈಗಾಗಲೇ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಐಪಿ ಎಡ್ರೆಸ್ ಪರಿಶೀಲನೆ ನಂತರ ವಿದೇಶಲ್ಲಿದ್ದಾರೆ ಎನ್ನುವುದು ಸ್ಪಷ್ಟವಾದ ಬಳಿಕ ಈ ಎಲ್ಲ ಆರೋಪಿಗಳ ಪಾಸ್ಪೋರ್ಟ್ ರದ್ದತಿಗೆ ನ್ಯಾಯಾಲಯಕ್ಕೆ ಮನವಿ ತಯಾರಿ ನಡೆಸುತ್ತಿದ್ದಾರೆ.
ಇದಕ್ಕಾಗಿ ಈಗಾಗಲೇ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ್ದು, ಆರೋಪಿಗಳ ಪಾಸ್ಪೋರ್ಟ್ ಆಮದಿಗಾಗಿ ಆದೇಶವನ್ನು ನ್ಯಾಯಾಲಯದಿಂದ ಪಡೆಯುವ ಬಗ್ಗೆ,ಆರೋಪಿಗಳ ವೀಸಾ ರದ್ದು, ಹಾಗೂ‘ಲೆಟರ್ಸ್ ರೊಗೇಟರಿ’ ಎಂಬ ಸಲಹೆ ತಜ್ಞರು ನೀಡಿದ್ದಾರೆ ಎಂದು ತಿಳಿದುಬಂದಿದೆ.