ಮಂಗಳೂರು, ಜ 02 (Daijiworld News/MB) : ಹೊಸ ವರ್ಷದ ಮೋಜು, ಮಸ್ತಿಗೆ ಈ ಬಾರಿ ನಗರ ಪೊಲೀಸರು ಕಡಿವಾಣ ಹಾಕಿದ್ದು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷಾಂತ್ಯದ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟ ಸರಿಸುಮಾರು 1,64,083 ಲೀಟರ್ಗಳಷ್ಟು ಕಡಿಮೆಯಾಗಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದು ಮದ್ಯಪ್ರಿಯರು ಮನಬಂದಂತೆ ಮದ್ಯ ಸೇವನೆ ಮಾಡಿ ಸಂಭ್ರಮಾಚರಣೆ ಮಾಡುವ ಅವಕಾಶವಿರಲಿಲ್ಲ. ಈ ಪರಿಣಾಮ ಡಿಸೆಂಬರ್ನ ಮದ್ಯ ಮಾರಾಟ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
ಈ ಬಾರಿ ಮದ್ಯರಾತ್ರಿ ಹೊಸ ವರ್ಷಾಚರಣೆ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದು ಪೊಲೀಸರ ಕಟ್ಟುನಿಟ್ಟಿನ ಸೂಚನೆಯಂತೆ ರಾತ್ರಿ 12ಕ್ಕೆ ಪಾರ್ಟಿ ಮುಕ್ತಾಯಗೊಂಡಿದೆ.
ಅಲ್ಲದೆ ಡಿಸೆಂಬರ್ 19ರಂದು ನಡೆದ ಹಿಂಸಾಚಾರ, ಗೋಲಿಬಾರ್ನಿಂದ ಹೇರಲಾಗಿದ್ದ ಕರ್ಫ್ಯೂ ಕೂಡಾ ಜನಜೀವನಕ್ಕೆ ಹೊಡೆತ ನೀಡಿದ್ದು, ಹೊಸ ವರ್ಷ, ಕ್ರಿಸ್ಸ್ ಹಬ್ಬಕ್ಕೆ ತಣ್ಣೀರು ಎರಚಿತ್ತು. ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬರುತ್ತಿರಲಿಲ್ಲ. ಡಿಸೆಂಬರ್ ತಿಂಗಳಿನಲ್ಲಿ ಮದ್ಯ ಮಾರಾಟ ಕಡಿಮೆಯಾಗಲು ಇದೇ ಕಾರಣ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ 18,114,000 ಲೀಟರ್ಗಳಷ್ಟು ಮದ್ಯ ಮಾರಾಟವಾಗುತ್ತಿದ್ದು ಡಿಸೆಂಬರ್ ತಿಂಗಳಿನಲ್ಲಿ ಮಾರಾಟ ಸರಾಸರಿ 20 ಲಕ್ಷ ದಾಟುತ್ತದೆ. ಆದರೆ ಈ ಬಾರಿ ಡಿಸೆಂಬರ್ ಅಂತ್ಯಕ್ಕೆ 18,67,896 ಲೀಟರ್ಗಳಷ್ಟು ಮದ್ಯ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 1,64,073 ಲೀಟರ್ಗಳಷ್ಟು ಕಡಿಮೆಯಾಗಿದೆ. 2018-19ನೇ ಸಾಲಿನ ಡಿಸೆಂಬರ್ ತಿಂಗಳಾಂತ್ಯಕ್ಕೆ 20,22,496 ಲೀಟರ್ ಮದ್ಯ ಮಾರಾಟವಾಗಿದ್ದು, ಇದರಲ್ಲಿ ಬಹುತೇಕ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲೇ ಮಾರಾಟವಾಗಿತ್ತು.