ಮಂಗಳೂರು, ಜ 02 (Daijiworld News/MSP): ಪಕ್ವ ಸಮಯಕ್ಕೆ ನಮ್ಮ ಪರಿಪೂರ್ಣ ಶಕ್ತಿಯನ್ನು ಪ್ರದರ್ಶಿಸಬೇಕು. ಆಗ ನಮ್ಮ ವ್ಯಕ್ತಿತ್ವ ವರ್ಣರಂಜಿತವಾಗುತ್ತದೆ ಎಂದು ಮಂಗಳೂರಿನ ಡೆರ್ಮಕೇರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಗಣೇಶ್ ಎಸ್. ಪೈ ಅಭಿಪ್ರಾಯಪಟ್ಟರು.
ವಳಚ್ಚಿಲ್ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ೩೪ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋಶಾವಸ್ಥೆಯ ಹುಳ ಎಂಥ ಚಿಟ್ಟೆಯಾಗುತ್ತದೆ ಎಂದು ಹೇಳಲು ಅಸಾಧ್ಯ. ವಿದ್ಯಾರ್ಥಿಗಳು ಭವಿಷ್ಯದ ಚಿಟ್ಟೆಗಳು. ಭವಿಷ್ಯದಲ್ಲಿ ಬಣ್ಣದ ಚಿಟ್ಟೆಗಳಂತೆ ಹಾರಾಡುವಂತೆ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಎಕ್ಸ್ಪರ್ಟ್ ಸದಾ ಕಾರ್ಯತತ್ಪರವಾಗಿದೆ.
ಶಿಕ್ಷಣವನ್ನು ಅತ್ಯುನ್ನತವಾದ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ನೀಡುವಲ್ಲಿ ಎಕ್ಸ್ಪರ್ಟ್ ಆರೋಗ್ಯಕರ ಸಾಧನೆ ಮಾಡುತ್ತಿದೆ. ಇದಕ್ಕೆ ಸಂಸ್ಥೆಯನ್ನು ಮುನ್ನಡೆಸುವವರ ಆರೋಗ್ಯವೇ ಕಾರಣ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮವಾದ ಉನ್ನತ ಶಿಕ್ಷಣದ ಅವಶ್ಯಕತೆಯಿದೆ. ವೈಜ್ಞಾನಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ಇಂಥ ಸುಂದರ ನಗರದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟವಂತರು ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆ ಮತ್ತು ಸದಾ ಹೊಸತನಕ್ಕೆ ಸ್ಪಂದಿಸುತ್ತಿರಬೇಕು. ವೃತ್ತಿಯ ಜೊತೆಗೆ ಪ್ರವೃತ್ತಿಯೂ ಮುಖ್ಯ. ಕಲೆಗಳ ಆಸಕ್ತಿ ಮನಸ್ಸಿಗೆ ಮುದ ನೀಡುತ್ತದೆ ಎಂದವರು ವಿವರಿಸಿದರು. ಗೌರವ ಅತಿಥಿಯಾಗಿ ಮಾತನಾಡಿದ ಮಂಗಳೂರು ಸ್ಮಾರ್ಟ್ ಸಿಟಿ ನಿರ್ದೇಶಕ ಹಾಗೂ ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಅವರು, ವಿದ್ಯಾರ್ಥಿಗಳು ರಾಷ್ಟ್ರನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬದುಕಿನಲ್ಲಿ ವೈಫಲ್ಯದ ಅನುಭವ ಸಫಲತೆಗೆ ದಾರಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮದೇ ಆದ ಗುರಿಗಳನ್ನು ಹೊಂದಿದ್ದರೆ ಗೆಲುವಿನ ಮೆಟ್ಟಿಲು ಏರಲು ಸಾಧ್ಯ ಎಂದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ತಮ್ಮ ಪ್ರಧಾನ ಭಾಷಣದಲ್ಲಿ, ಆಸೆಯೇ ಸುಖಕ್ಕೆ ಕಾರಣ. ಆಸೆಯಿಲ್ಲದೆ ಜೀವನದಲ್ಲಿ ಯಾವ ಸಾಧನೆಯೂ ಸಾಧ್ಯವಿಲ್ಲ. ಈ ಆಸೆಯಿಂದ ನಮ್ಮ ಮೂಲಭೂತ ಅವಶ್ಯಕತೆಗಳ ಸಾಧಿಸುವುದರೊಂದಿಗೆ ದೇಶಕ್ಕೆ ಅನನ್ಯ ಕೊಡುಗೆ ನೀಡಬೇಕು. ಭವಿಷ್ಯದ ಗುರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಯೋಜನೆ ಮತ್ತು ಯೋಚನೆ ಇರಬೇಕು. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕ ಮತ್ತು ಶಿಕ್ಷಕರ ಪರಿಶ್ರಮ, ತ್ಯಾಗ, ಕಾಳಜಿ ಅನನ್ಯವಾದುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅವರು ಮಾತನಾಡಿ, ಎಕ್ಸ್ಪರ್ಟ್ನ ಯಶೋಗಾಥೆ ವಿದ್ಯಾರ್ಥಿಗಳ ಕೈಗಳಲ್ಲಿದೆ. ಇದಕ್ಕೆ ಎಲ್ಲ ಶಿಕ್ಷಕರ ಕೊಡುಗೆಯೂ ಇದೆ. ಯಾವುದೇ ವೈಫಲ್ಯ ತಾತ್ಕಾಲಿಕ; ಆದರೆ ಸಫಲ ಸಾಧನೆಗೆ ಮಿತಿಗಳೇ ಇಲ್ಲ. ವಿಫಲತೆಯನ್ನು ತಿದ್ದಿಕೊಳ್ಳುವುದರಿಂದ ಯಶಸ್ಸಿನ ಫಲವನ್ನು ನಾವು ಸವಿಯಬಹುದು. ವಿದ್ಯಾರ್ಥಿಗಳು ಯಾವುದೇ ಸದವಕಾಶಗಳನ್ನು ತಾವಾಗಿಯೇ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಉಪಪ್ರಾಂಶುಪಾಲ ರಾಘವೇಂದ್ರ ಶೆಣೈ ಎಸ್. ವಾರ್ಷಿಕ ವರದಿ ಮಂಡಿಸಿದರು. ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್.ನಾಯಕ್, ವಾಸ್ತುಶಿಲ್ಪಿ ದೀಪಿಕಾ ಎ.ನಾಯಕ್, ಟ್ರಸ್ಟಿಗಳಾದ ಉಸ್ತಾದ್ ರಫೀಕ್ ಖಾನ್, ಸುರೇಶ್ ಪೈ, ಕೊಡಿಯಾಲ್ಬೈಲ್ ಎಕ್ಸ್ಪರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೇಖರ್ ಪಾಟೀಲ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ದೇಶಕ ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ ಉಡುಪ ವಂದಿಸಿದರು. ವಿದ್ಯಾರ್ಥಿಗಳಾದ ಉತ್ಪಲಾ ಮತ್ತು ಅನಿರುದ್ಧ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ನಡೆದ ಧ್ವಜಾರೋಹಣವನ್ನು ಕೊಡಿಯಾಲ್ಬೈಲ್ ಕ್ಯಾಂಪಸ್ಸಿನ ಹಳೆವಿದ್ಯಾರ್ಥಿ ಡಾ.ಕಿಶನ್ ದೇಲಂಪಾಡಿ ಮತ್ತು ವಳಚ್ಚಿಲ್ ಕ್ಯಾಂಪಸ್ಸಿನ ಹಳೆವಿದ್ಯಾರ್ಥಿ ಹಾಗೂ 2018-19ರ ಸಾಲಿನಲ್ಲಿ ಕಾಲೇಜಿನ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ಭುವನ್ ವಿ.ಬಿ. ನೆರವೇರಿಸಿದರು. ಬಳಿಕ ಟೀಮ್ ಮಂಗಳೂರು ನೇತೃತ್ವದಲ್ಲಿ ಗಾಳಿಪಟ ಉತ್ಸವ ನಡೆಯಿತು. ಕಾಲೇಜು ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಬಹುಮಾನ ವಿತರಿಸಿದರು.