ಕಾಪು, ಜ 02 (DaijiworldNews/SM): ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ಮಾರಕವಾಗಿದ್ದು, ಸಂವಿಧಾನಕ್ಕೆ ವಿರೋಧವಾಗಿದೆ. ಭಾರತದ ಜಾತ್ಯತೀತೆಯ ವಿರುದ್ಧ ಪ್ರಹಾರ ಮಾಡುವ ಕಾನೂನು ಆಗಿರುತ್ತದೆ ಆ ನಿಟ್ಟಿನಲ್ಲಿ ಕಾಪು ಜಾತ್ಯತೀತ ನಾಗರಿಕ ಸಮಿತಿ ನೇತೃತ್ವದಲ್ಲಿ ಜ.೪ರಂದು ಬೆಳಿಗ್ಗೆ ೧೦ ಗಂಟೆಗೆ ಕಾಪು ಪೇಟೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಲಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಗುರುವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡುತ್ತಾ ಮಾತನಾಡಿ, ಜಾತ್ಯಾತೀತತೆ ಮತ್ತು ಸಹೋದರತ್ವಕ್ಕೆ ತಿಲಾಂಜಲಿಯಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕವಾಗುವ ಜನವಿರೋಧಿ ಕಾನೂನುಗಳನ್ನು ಅಸಾಂವಿಧಾನಿಕವಾಗಿ ಮತ್ತು ಬಲವಂತವಾಗಿ ನಾಗರಿಕರ ಮೇಲೆ ಹೇರುವ ಹುನ್ನಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಇನ್ನು, ಪ್ರತಿಭಟನೆಯಲ್ಲಿ ಚಿಂತಕ ಫಣಿರಾಜ್, ಹರ್ಷ ಕುಮಾರ್, ಧರ್ಮಗುರು ವಿಲಿಯಂ ಮಾರ್ಟಿಸ್ ಮತ್ತಿತರ ಪ್ರಮುಖರು ಪಾಲ್ಗೊಳ್ಳುವರು ಎಂದರು.
ಕಾಪು ಜಾತ್ಯತೀತ ನಾಗರಿಕ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ದೇಶದ ಜನರ ಹಿತ ಕಾಪಾಡದೆ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ದೇಶವನ್ನು ಮುನ್ನಡೆಸುವುದು ಪ್ರಧಾನ ಮಂತ್ರಿಯವರ ಕರ್ತವ್ಯ. ನುಸುಳುಕೋರರು, ಭಯೋತ್ಪಾದಕರು, ಕೋಮುವಾದಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಇಂತಹ ಕಾನೂನು ಹೇರಿಕೆ ಸಮಂಜಸ ಅಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ ಅಡ್ವೆ, ಹರೀಶ್ ನಾಯಕ್ ಕಾಪು ಉಪಸ್ಥಿತರಿದ್ದರು.