ಉಡುಪಿ, ಜ 02 (DaijiworldNews/SM): ರಾಜ್ಯದ ಎಲ್ಲಾ ಪಡಿತರ ಚೀಟಿದಾರರು ಜನವರಿ ತಿಂಗಳ ೧೦ರೊಳಗೆ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕೆಂದು ಸರಕಾರ ಆದೇಶಿಸಿದೆ. ಪಡಿತರ ಚೀಟಿದಾರರ ಕುಟುಂಬದ ಸದಸ್ಯರುಗಳ ಇ-ಕೆವೈಸಿಯನ್ನು ಪೂರ್ಣಗೊಳಿಸಲು ಡಿಸೆಂಬರ್ ಹಾಗೂ ಜನವರಿ ೧೦ರವರೆಗೆ ಸಮಯವಕಾಶ ನೀಡಲಾಗಿತ್ತು.
ಆದರೆ, ರಾಜ್ಯದಲ್ಲಿ ಈವರೆಗೆ ಇ-ಕೆವೈಸಿ ಸಂಗ್ರಹಿಸುವ ಕಾರ್ಯವು ಶೇ.೩೪.೩೨ರಷ್ಟು ಮಾತ್ರ ಪೂರ್ಣಗೊಂಡಿರುವುದರಿಂದ, ಸರಕಾರ ಇ-ಕೆವೈಸಿ ಮಾಡಲು ಗಡುವು ವಿಸ್ತರಣೆಗೊಳಿಸಿದ್ದು ಜ.೧ ರಿಂದ ಜ.೩೧ರವರೆಗೆ ಸಮಯವಕಾಶ ನೀಡಿದೆ. ಈ ಸಮಯದಲ್ಲಿ ಪ್ರತಿದಿನ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಸಂಗ್ರಹಿಸುವ ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸಲು ಸೂಚಿಸಿದೆ. ಬಾಕಿ ಇರುವ ಎಲ್ಲಾ ಪಡಿತರ ಚೀಟಿದಾರರ ಇ-ಕೆವೈಸಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ.
ಇನ್ನು, ಇ-ಕೆವೈಸಿ ಕಾರ್ಯವನ್ನು ಮಾಡಲು ನ್ಯಾಯಬೆಲೆ ಅಂಗಡಿ ವರ್ತಕರು ಅವರ ವ್ಯಾಪ್ತಿಯ ಪಡಿತರ ಚೀಟಿದಾರರಿಗೆ ಮಾಹಿತಿಯನ್ನು ನೀಡಬೇಕು. ಇ-ಕೆವೈಸಿ ಪೂರ್ಣಗೊಳಿಸದ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಹಾಜರಾಗಿ ಇ-ಕೆವೈಸಿ ಪಡೆಯಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರ ಪ್ರಕಟಣೆ ತಿಳಿಸಿದೆ.