ಮೈಸೂರು ಜ 24: ನಾನು ಏನೆಂದು ರಾಜ್ಯದ ಜನತೆಗೆ ತಿಳಿದಿದೆ. ನನ್ನ ಹಿನ್ನಲೆ, ನಾನು ಬದುಕುತ್ತಿರುವ ರೀತಿ ರಾಜ್ಯಕ್ಕೆ ಮಾತ್ರವಲ್ಲ ದೇಶದ ಜನರಿಗೂ ತಿಳಿದಿದೆ . ಕಾರಣ ನನ್ನ ಬದುಕು ತೆರೆದ ಪುಸ್ತಕ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಜೀವನವೇ ತೆರೆದ ಪುಸ್ತಕವಾಗಿರುವಾಗ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ಮುಖಂಡರು ನನ್ನ ಬಗ್ಗೆ ಹೇಳಿದ ಸುಳ್ಳುಗಳನ್ನು ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಜನ ನಮಗಿಂತ ಬುದ್ಧಿವಂತರು. ನಾನು ನಿನ್ನೆ, ಮೊನ್ನೆ ಅಧಿಕಾರಕ್ಕೆ ಬಂದಿಲ್ಲ. 1984ರಲ್ಲೇ ಮಂತ್ರಿಯಾಗಿದ್ದೆ. ರಾಜ್ಯದ ಜನತೆ ನನ್ನನ್ನು ಗಮನಿಸುತ್ತಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಪರಿವರ್ತನಾ ಯಾತ್ರೆಯಲ್ಲಿ ಸುಮ್ಮನೆ ತಮಟೆ ಬಾರಿಸಿಕೊಂಡು, ಪುಂಗಿ ಊದಿಕೊಂಡು ಓಡಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿಜೆಪಿ ವಿರುದ್ಧ ಕಿಡಿಕಾರಿದರು.
ಅಧಿಕಾರದಲ್ಲಿದ್ದಾಗ ಬಿಜೆಪಿ ಜೈಲಿಗೆ ಬಂದು ಹೋಗಿದ್ದೆ ದೊಡ್ಡ ಸಾಧನೆ, ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿ ಹಾಗೂ ಯಡಿಯೂರಪ್ಪ ಅವರು ತಮ್ಮ ಇತಿಹಾಸವನ್ನೊಮ್ಮೆ ಮತ್ತೆ ನೆನಪಿಸಿಕೊಳ್ಳಲಿ ಎಂದು ಕಿಡಿಕಾರಿದರು.