ಕಾರ್ಕಳ, ಮಂಗಳೂರು, ಜ 03 (DaijiworldNews/SM): ತಾಲೂಕಿನ ಬೆಳ್ಮಣ್ ಸಚ್ಚೇರಿಪೇಟೆ ನಲ್ಲೆಗುತ್ತು ಬಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಅಣೆಕಟ್ಟಿಗೆ ಹಲಗೆ ಹಾಕಿ ನೀರು ಸಂಗ್ರಹಿಸಿದ್ದು ಇದರಿಂದಾಗಿ ಜನರ ಓಡಾಟಕ್ಕಿದ್ದ ಹಳೆಯ ಸೇತುವೆ ನೀರಿನ ಮಟ್ಟ ಹೆಚ್ಚಳವಾಗಿ ಮುಳುಗಿದೆ. ಪರಿಣಾಮವಾಗಿ ಶಾಲಾ ಮಕ್ಕಳು, ದಾರಿಹೋಕರು ನದಿ ನೀರಿನಲ್ಲೇ ಪ್ರಾಣಾಪಾಯದಿಂದ ಸಂಚಾರ ನಡೆಸಿದ ಘಟನೆ ಸಚ್ಚೇರಿಪೇಟೆಯಲ್ಲಿ ಶುಕ್ರವಾರ ನಡೆದಿದೆ.
ನಲ್ಲೆಗುತ್ತು ಬಳಿಯಲ್ಲಿ ನೂತನ ಸೇತುವೆ ಸಹಿತ ಅಣೆಕಟ್ಟು ನಿರ್ಮಾಣವಾದರೂ ಸೇತುವೆಯ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗುತ್ತಿಗೆದಾರ ನಿರ್ಮಿಸದ ಕಾರಣ ಹಳೆಯ ಸೇತುವೆ ಮುಳುಗಿದ್ದು ಅತ್ತಿತ್ತ ಸಾಗುವವರು ನೀರಿನಲ್ಲೇ ಸಾಗಬೇಕಾದ ಅನಿವಾರ್ಯತೆ ಎದುರಾಯಿತು.
ಮುಳುಗಿದ ಅಣೆಕಟ್ಟು :
ಹೊಸ ಸೇತುವೆಯ ಅಣೆಕಟ್ಟಿಗೆ ಹಲಗೆ ಹಾಕಿದ ಬಳಿ ಹಳೆಯ ಅಣೆಕಟ್ಟಿನ ಸೇತುವೆ ಹಲವು ಬಾರಿ ಮುಳುಗಡೆಯಾಗಿದ್ದು ಸಮೀಪದ ಕೃಷಿ ಭೂಮಿಯು ಜಾಲಾವೃತಗೊಂಡಿತ್ತು. ಆ ಬಳಿಕ ಸ್ಥಳೀಯರು ಒಂದು ಕಿಂಡಿಯನ್ನು ತೆರವು ಮಾಡಿ ನೀರು ಹರಿದು ಹೋಗಲು ವ್ಯವಸ್ಥೆಯನ್ನು ಕಲ್ಪಿಸಿದ್ದರು. ಇದೀಗ ಬೋಳ ಪಾಲಿಂಗೇರಿಯಲ್ಲಿರುವ ಅಣೆಕಟ್ಟಿನ ಹಲಗೆಯನ್ನು ತೆರವು ಮಾಡಿರುವ ಪರಿಣಾಮ ಏಕಾಏಕಿ ನೀರಿನ ಮಟ್ಟ ಹೆಚ್ಚಳವಾಗಿ ನಲ್ಲೆಗುತ್ತು ಹಳೆಯ ಅಣೆಕಟ್ಟಿನ ಸೇತುವೆ ಸಂಪೂರ್ಣ ಮುಳುಗಡೆಯಾಗಿ ರಸ್ತೆಯುದ್ದಕ್ಕೂ ನೀರು ಆವರಿಸಿದೆ. ಇದರಿಂದ ಬೋಳ, ಕಡಂದಲೆ ಹಾಗೂ ಸಚ್ಚೇರಿಪೇಟೆ ಭಾಗದ ಜನ ಸಂಚಾರ ನಡೆಸಲು ಸಂಕಷ್ಟಪಡುವಂತಾಯಿತು.
ನಡುರಸ್ತೆಯಲ್ಲೇ ಉಳಿದ ವಿದ್ಯಾರ್ಥಿಗಳು:
ಇನ್ನು ಸೇತುವೆ ಮೇಲೆ ನೀರು ಬಂದ ಪರಿಣಾಮ ಶಾಲೆ ಬಿಟ್ಟು ಮನೆಗೆ ತೆರಳಬೇಕಾದ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿ ಉಳಿಯಬೇಕಾಯಿತು. ನದಿಯ ನೀರು ಅಣೆಕಟ್ಟಿನಿಂದ ಮೇಲ್ಬಾಗದಲ್ಲಿ ಹರಿದಾಡುತ್ತಿದ್ದು ಅಪಾಯಕಾರಿಯಾಗಿದ್ದು ಶಾಲಾ ವಾಹನಗಳು ಕೂಡ ಓಡಾಟವನ್ನು ನಡೆಸುವುದು ಕಷ್ಟಕರವಾಗಿತ್ತು. ಒಂದಿಷ್ಟು ವಾಹನಗಳು ನೀರಿನ ನಡುವೆ ಸಾಹಸವನ್ನು ಮಾಡಿಕೊಂಡು ರಸ್ತೆಯನ್ನು ದಾಟಿದರೆ ಶಾಲಾ ಮಕ್ಕಳನ್ನು ಹೊತ್ತು ತಂದ ವಾಹನಗಳು ರಸ್ತೆಯಲ್ಲೇ ಉಳಿಯುವಂತಾಯಿತು. ಬಳಿಕ ವಿದ್ಯಾರ್ಥಿಗಳನ್ನು ಸ್ಥಳೀಯರು ನೀರಿನ ನಡುವೆ ದಡ ಸಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲ ವಾಹನ ಸವಾರರು ನೀರಿನ ಮಟ್ಟ ಕಡಿಮೆಯಾಗುವವರೆಗೂ ಕಾದು ಕುಳಿತು ಮತ್ತೆ ತಮ್ಮ ತಮ್ಮ ಪರಿಸರನ್ನು ಸೇರಿಕೊಂಡರು.
ನೂತನ ಸೇತುವೆಗೆ ರಸ್ತೆ ಸಂಪರ್ಕ ಕಲ್ಪಿಸಿ :
ಹಳೆಯ ಅಣೆಕಟ್ಟಿನ ಪಕ್ಕದಲ್ಲೇ ನೂತನ ಸೇತುವೆಯನ್ನು ನಿರ್ಮಿಸಿದ್ದರೂ ಅದಕ್ಕೆ ಸಂಪರ್ಕವನ್ನು ಕಲ್ಪಿಸಿಲ್ಲ. ಹೀಗಾಗಿ ಅಪಾಯಕಾರಿಯಾಗಿರುವ ಹಳೆಯ ಸೇತುವೆಯಲ್ಲೇ ನದಿ ನೀರಿನ ಮಧ್ಯೆ ವಿದ್ಯಾರ್ಥಿಗಳು ವಾಹನ ಸವಾರರು ಅತ್ತಿತ್ತ ನಿತ್ಯ ಸಾಗಬೇಕಾದ ಅನಿವಾರ್ಯ ಎದುರಾಗಿದೆ. ಹೊಸ ಸೇತುವೆಯ ರಸ್ತೆ ಸಂಪರ್ಕಕ್ಕೆ ಮಣ್ಣಿನ ರಾಶಿಯನ್ನು ತಂದು ಹಾಕಿದರೂ ಸಂಪರ್ಕವನ್ನು ಕಲ್ಪಿಸಿಲ್ಲ. ಹೀಗಾಗಿ ನದಿಯ ನೀರಿನ ನಡೆವೆ ಸಂಚಾರ ನಡೆಸುವು ತುಂಬಾನೇ ಅಪಾಯಕಾರಿಯಾಗಿದೆ ಕೂಡಲೇ ಹೊಸ ಸೇತುವೆಗೆ ರಸ್ತೆಯ ಸಂಪರ್ಕವನ್ನು ಕಲ್ಪಿಸಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.