ಸಂಪಾಜೆ, ಜ 03 (DaijiworldNews/SM): ಮಡಿಕೇರಿ ಅರಣ್ಯ ವಿಭಾಗದ ವ್ಯಾಪ್ತಿಯ ಸಂಪಾಜೆ ಉಪ ವಲಯಾರಣ್ಯಾಧಿಕಾರಿ ಪ್ರದೇಶದ ಸಂಪಾಜೆಯ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಮಾರು ೫ ಲಕ್ಷ ಮೌಲ್ಯದ ಹರಳುಕಲ್ಲನ್ನು ಸಂಪಾಜೆ ಅರಣ್ಯ ಇಲಾಖೆ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಅಬ್ದುಲ್ ಕುಂಙಿ ಅಲಿಯಾಸ್ ಅಂದಾಯ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಸುಮಾರು 103 ಕೆ.ಜಿಯಷ್ಟು ಹರಳುಕಲ್ಲು ದಾಸ್ತಾನಿ ಇರಿಸಲಾಗಿತ್ತು. ಖಚಿತ ಮಾಹಿತಿಯನ್ನು ಕಲೆಹಾಕಿದ ಅರಣ್ಯ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ದಾಳಿ ನಡೆಸಿ ಕಲ್ಲನ್ನು ವಶಪಡಿಸಿಕೊಂಡಿದೆ.
ಈ ವೇಳೆ ಆರೋಪಿ ಅಬ್ದುಲ್ ಕುಂಙಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಾಗಿ ಇಲಾಖೆಯ ಅಧಿಕಾರಿಗಳು ಬಲೆ ಬೀಸಿದ್ದಾರೆ. ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಸಂಪಾಜೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿತೀಶ್ ನೇತೃತ್ವದ ತಂಡ ದಾಳಿ ನಡೆಸಿದೆ.