ಬೆಂಗಳೂರು, ಜ 24 : ಮಹದಾಯಿ ಯೋಜನೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮದ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟವೂ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ಹಲವು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು, ಗದಗ, ಹುಬ್ಬಳ್ಳಿ-ಧಾರವಾಡ ಬಂದ್ ಗೆ ಸಂಪೂರ್ಣ ಸ್ತಬ್ದವಾಗಿದ್ದು ಪ್ರತಿಭಟನೆಯ ಕಾವು ಜೋರಾಗಿದೆ. ಇನ್ನು ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಮಲ್ಲೇಶ್ವರಂನಲ್ಲಿ ಬಂದ್ ಗೆ ಸಹಕರಿಸದಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ಪ್ರತಿಭಟನಾ ನಿರತರು ಕಲ್ಲು ತೂರಾಟ ನಡೆಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ ಗೊಂಡಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಮಿಳುನಾಡಿನಿಂದ ಬರುವ ಮತ್ತು ತೆರಳುವ ಎಲ್ಲಾ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ. ಬೆಳಗ್ಗೆ ಮೆಜೆಸ್ಟಿಕ್ನಿಂದ ಖಾಸಗಿ ವಾಹನಗಳನ್ನು ಪಡೆದರೆ ಈಗ ಆ ಸೇವೆಯೂ ಲಭ್ಯವಾಗುತ್ತಿಲ್ಲ.ಮಾಲ್ಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಐಟಿ ಕಂಪೆನಿಗಳಿಗೆ ರಜೆ ನೀಡಲಾಗಿದೆ. ಬೆಳಗಿನ ತಿಂಡಿ ಸಿಗದೆ ಹಲವರು ಪರದಾಡುತ್ತಿದ್ದಾರೆ. ರಾಜ್ಯದ ವಿವಿಧೆಡೆ ಬಂದ್ಗೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಗದಗ ಜಿಲ್ಲೆಯಲ್ಲಿ ಬಂದ್ ಆಚರಿಸಲಾಗುತ್ತಿದೆ. ಗದಗದ ನರಗುಂದದಲ್ಲಿ ಗೋವಾದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಧಾರವಾಡದಲ್ಲಿ ಬೆಳ್ಳಂಬೆಳಗ್ಗೆಯೇ ಬೀದಿಗಿಳಿದಿರುವ ಕರ್ನಾಟಕ ನವ ನಿರ್ಮಾಣ ಸೇನೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲೂ ಪ್ರತಿಭಟನೆ ಶುರುವಾಗಿದ್ದು, ನಾರಾಯಣ ಗೌಡ ಬಣದ ಕರವೇ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಗದಗಿನ ನರಗುಂದದಲ್ಲೂ ಪ್ರತಿಭಟನೆ ಬಿಸಿ ಜಾಸ್ತಿಯಾಗಿದೆ. ಮುಂಜಾನೆಯೇ ಪ್ರತಿಭಟನಾಕಾರರು ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಾವುದೇ ರೀತಿಯಲ್ಲಿ ಬಂದ್ ವಾತಾವರಣ ಕಂಡು ಬಂದಿಲ್ಲ. ಎಂದಿನಂತೆ ಬಸ್ ಸಂಚಾರ , ಶಾಲಾ ಕಾಲೇಜುಗಳು , ಅಂಗಡಿ ಮುಂಗಟ್ಟುಗಳು ತೆರೆದಿವೆ.