ಮಂಗಳೂರು ಜ 24 : ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ಒಂದೆಡೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮೂಲಕ ಪ್ರತಿಭಟನೆಯಲ್ಲಿ ತೊಡಗಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಕೆಸೆರೆರೆಚಾಟದಲ್ಲಿ ತೊಡಗಿದೆ. ಈ ನಡುವೆ ಮಹದಾಯಿ ಹೋರಾಟಗಾರರ ಪರ ನಿಂತ ಪ್ರಕಾಶ್ ರಾಜ್ ನಮ್ಮ ನೀರು ನಮ್ಮ ಹಕ್ಕು ಎಂದು ಬೆಂಬಲ ಘೋಷಿಸಿದ್ದಾರೆ. ತಮ್ಮ ಟ್ವೀಟ್ ಖಾತೆಯಲ್ಲಿ ವಿಡೀಯೋ ಅಪ್ ಲೋಡ್ ಮಾಡಿ, ಮಹದಾಯಿ ವಿಚಾರದಲ್ಲಿ ಮೊದಲು ಎಲ್ಲ ಪಕ್ಷಗಳೂ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಕಳಸ - ಬಂಡೂರಿ ನೀರಿನ ಮೇಲೆ ಕನ್ನಡಿಗರ ಹಕ್ಕಿದೆ. ಅದು ಕನ್ನಡಿಗರ ಮೂಲಭೂತ ಹಕ್ಕು .ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಬಿಡಬೇಕು ಎಂದಿದ್ದಾರೆ. ಅಲ್ಲದೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಅದು ರಾಜಕೀಯ ಪಕ್ಷವಾಗದೇ ಸರ್ಕಾರವಾಗಬೇಕು. ಜನರಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಮಹದಾಯಿ ಜನಪರ ಹೋರಾಟವಾಗಿದ್ದು, ದಯವಿಟ್ಟು ಜನರ ಮೂಲಭೂತ ಹಕ್ಕುಗಳ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಎಲ್ಲಾ ಪಕ್ಷಗಳು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಮಹದಾಯಿ ಹೋರಾಟ ಬಗೆಹರಿಸಲಾಗದ ಸಮಸ್ಯೆಯಲ್ಲ , ಎಲ್ಲಾ ರಾಜಕೀಯ ಪಕ್ಷದ ಮುಖಂಡರು , ಸಿದ್ದಾಂತಗಳನ್ನು, ಓಟಿಗಾಗಿ ಭಿಕ್ಷೆ ಬೇಡುವುದನ್ನು ಬದಿಗಿರಿಸಿ ಒಂದೇ ವೇದಿಕೆಯಲ್ಲಿ ನಮ್ಮ ಹಕ್ಕಿಗಾಗಿ ಹೋರಾಡೋಣ ಎಂದುಕರೆ ನೀಡಿದ್ದಾರೆ.