ಮಂಗಳೂರು ಜ 25: ಮಹದಾಯಿ ಯೋಜನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತ್ರಿಕಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು,ಬಸ್ -ವಾಹನ ಸಂಚಾರವೂ ಸಹಜವಾಗಿದೆ. ಆದರೆ ಮಹದಾಯಿ ವಿಚಾರವಾಗಿ ವಿವಾದವನ್ನು ಬಗೆಹರಿಸಲು ಕೇಂದ್ರ ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳೂರು- ಕೊಯಮುತ್ತೂರು ರೈಲು ತಡೆಹಿಡಿದ ಘಟನೆ ನಡೆಯಿತು. ಆದರೆ ಇದೇ ವೇಳೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಬಂದಂತ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು, ಕರವೇ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿದರು.
ತುಳುನಾಡಿನ ಬಗ್ಗೆ ಅವಹೇಳನಕಾರಿ ಬರಹವನ್ನು ಪೇಸ್ಬುಕ್ ಪೇಜ್ನಲ್ಲಿ ಕರವೇ ಕಾರ್ಯಕರ್ತ ಪೋಸ್ಟ್ ಮಾಡಿದ್ದ ಹಿನ್ನಲೆಯಲ್ಲಿ ತುಳುನಾಡಿನಲ್ಲಿ ಕರವೇ ಸಂಘಟನೆಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಜ 25 ರ ಕರ್ನಾಟಕ ಬಂದ್ ಗೆ ಯಾವುದೇ ರೀತಿಯಲ್ಲಿ ಬೆಂಬಲ ನೀಡದೇ ಇರಲು ತುಳುನಾಡಿನ ಜನರು ನಿರ್ಧರಿಸಿದ್ದರು. ಅದ್ದರಿಂದ ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ಘಟಕದ ಕಾರ್ಯಕರ್ತರು ಇಂದಿನ ಬಂದ್ಗೆ ಬೆಂಬಲ ವ್ಯಕ್ತಪಡಿಸಿ ರೈಲು ತಡೆಹಿಡಿದ ಹಿನ್ನಲೆಯಲ್ಲಿ ಆಕ್ರೋಶಗೊಂಡ ತುಳುನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು ಕರವೇ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.