ಬೈಂದೂರು, ನ.18 (DaijiworldNews/AA): ರೈಲು ಪ್ರಯಾಣಿಕರ ಮೊಬೈಲ್ ಫೋನ್ಗಳನ್ನು ಕಳವು ಮಾಡಿ, ಅವುಗಳ ಮೂಲಕ ಯುಪಿಐ ಬಳಸಿ ವಂಚನೆಯಿಂದ ಹಣ ವರ್ಗಾವಣೆ ಮಾಡುತ್ತಿದ್ದ 32 ವರ್ಷದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಪ್ರಕಟಣೆಯ ಪ್ರಕಾರ, ಆಗಸ್ಟ್ 2ರಂದು ಮಂಗಳೂರಿನಿಂದ ಮಡಗಾಂವ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರೂಬೆನ್ ಫರ್ನಾಂಡಿಸ್ ಎಂಬವರು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಅಂದು ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ರೈಲು ಬೈಂದೂರು ರೈಲ್ವೆ ನಿಲ್ದಾಣದ ಸಮೀಪ ಸಾಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಸುಮಾರು 17,000 ರೂ. ಮೌಲ್ಯದ ಅವರ 'ಮೊಟೊರೊಲಾ ಜಿ54 5ಜಿ' ಮೊಬೈಲ್ ಫೋನ್ ಕಳವು ಮಾಡಿದ್ದರು. ಬಳಿಕ ಆರೋಪಿಯು ಕದ್ದ ಮೊಬೈಲ್ ಬಳಸಿ ಯುಪಿಐ ವಹಿವಾಟಿನ ಮೂಲಕ 19,847 ರೂ. ಹಣವನ್ನು ವರ್ಗಾಯಿಸಿಕೊಂಡಿದ್ದನು.
ಈ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಕಲಂ 305(ಸಿ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ ಆ್ಯಕ್ಟ್) ಕಲಂ 66(ಸಿ) ಮತ್ತು 66(ಡಿ) ಅಡಿಯಲ್ಲಿ ಪ್ರಕರಣ (ಅಪರಾಧ ಸಂಖ್ಯೆ 145/2026) ದಾಖಲಿಸಿಕೊಂಡಿದ್ದರು.
ತನಿಖೆ ಕೈಗೆತ್ತಿಕೊಂಡ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಅವರು ಉಡುಪಿ ತಾಲೂಕಿನ ಐರೋಡಿ ಗ್ರಾಮದ ಸಾಸ್ತಾನ ಗೋಳಿಬೆಟ್ಟು ನಿವಾಸಿ ಶೀನ ಪೂಜಾರಿ ಅವರ ಪುತ್ರ ಪ್ರಹ್ಲಾದ್ (32) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಯಿಂದ ಮೊಟೊರೊಲಾ ಜಿ54 5ಜಿ, ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ಹಾಗೂ ಐಕ್ಯೂ ಜೆಡ್೯ ಸೇರಿದಂತೆ ಒಟ್ಟು ಮೂರು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ತನ್ನ ಸಹಚರ ಜೋಶಿ ನಾರಾಯಣ ನಾಯಕ್ ಎಂಬಾತನೊಂದಿಗೆ ಸೇರಿ ಆಗಸ್ಟ್ 2ರಂದು ಬೈಂದೂರು ಸಮೀಪ ರೈಲು ಪ್ರಯಾಣಿಕರೊಬ್ಬರ 'ಸ್ಯಾಮ್ಸಂಗ್ ಎಂ೩೪' ಮೊಬೈಲ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಅದೇ ಸಹಚರನೊಂದಿಗೆ ಸೇರಿ ಅಕ್ಟೋಬರ್ 13ರಂದು ಬೈಂದೂರು ಬಳಿ ಪ್ರಯಾಣಿಕರೊಬ್ಬರಿಂದ ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ಕದ್ದಿರುವುದಾಗಿಯೂ ಬಾಯ್ಬಿಟ್ಟಿದ್ದಾನೆ. ಇದರೊಂದಿಗೆ, ಮಾರ್ಚ್ 6ರಂದು ಬೈಂದೂರು ಸಮೀಪ ರೈಲು ಪ್ರಯಾಣಿಕರೊಬ್ಬರ ಐಕ್ಯೂ ಜೆಡ್೯ ಮೊಬೈಲ್ ಫೋನ್ ಕಳವು ಮಾಡಿರುವುದಾಗಿಯೂ ತಪ್ಪೊಪ್ಪಿಕೊಂಡಿದ್ದಾನೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 305ರ ಅಡಿ ಅಪರಾಧ ಸಂಖ್ಯೆ 142/2026, ಕಲಂ 305(ಸಿ) ಅಡಿ ಅಪರಾಧ ಸಂಖ್ಯೆ 144/2026 ಮತ್ತು ಕಲಂ 305(ಬಿ) ಅಡಿ ಅಪರಾಧ ಸಂಖ್ಯೆ 168/2026 ಪ್ರಕರಣಗಳು ದಾಖಲಾಗಿವೆ.
ಬಂಧಿತ ಆರೋಪಿಯು ಕಾರವಾರ ಗ್ರಾಮಾಂತರ (ಅ.ಸಂ. 89/2025), ಬಂಟ್ವಾಳ ನಗರ (ಅ.ಸಂ. 122/2026), ಉಡುಪಿ ನಗರ (ಅ.ಸಂ. 01/2023), ಬ್ರಹ್ಮಾವರ (ಅ.ಸಂ. 22/2017), ಕೋಟ (ಅ.ಸಂ. 09/2013) ಹಾಗೂ ಕುಂದಾಪುರ ನಗರ (ಅ.ಸಂ. 325/2025) ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್. ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬೈಂದೂರು ಪಿಎಸ್ಐಗಳಾದ ಸುನೀಲ್ ಕುಮಾರ್ ಬಿ. ವೈ. ಮತ್ತು ಮಹೇಶ್ ಪೂಜಾರಿ ಹಾಗೂ ಸಿಬ್ಬಂದಿ ಜಯರಾಮ್, ಚಿದಾನಂದ ಮತ್ತು ಮಾಳಪ್ಪ ದೇಸಾಯಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.