ಕಾರ್ಕಳ, ಜ 25: ಮತದಾನ ಹಕ್ಕು ಭಾರತೀಯ ನಾಗರಿಕನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಅರ್ಹ ಜನಪ್ರತಿನಿಧಿಯನ್ನು ಆಯ್ಕೆ ಮಾಡಬಹುದು. ಆ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಜಾಗೃತ ಸಮಾಜದಿಂದ ಉತ್ತಮ ಆಡಳಿತದ ಕೊಡುಗೆ ನೀಡಲು ಸಾಧ್ಯವೆಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ತಾಲೂಕು ಸೇವೆಗಳ ಸಮಿತಿಯ ಅಧ್ಯಕ್ಷರಾಗಿರುವ ಮಮತಾ ಎಸ್.ರಾವ್ ಹೇಳಿದರು.ನಗರದ ಎಸ್ವಿಟಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂವಿಧಾನವನ್ನು ಪರಿಪಾಲನೆ ಮಾಡುವುದು ಜನಪ್ರತಿನಿಧಿಯದಾಗಿದೆ. ದೇಶದಲ್ಲಿ ಎಲ್ಲ ವರ್ಗದವರನ್ನು ಗೌರವಿಸಿ ಸಂವಿಧಾನ ಚೌಕಟ್ಟಿನೊಳಗೆ ಮತದಾನ ನಡೆಯುತ್ತದೆ. ತಮ್ಮ ಹಕ್ಕುಗಳನ್ನು ಬಳಸಿಕೊಳ್ಳುವುದು ದೇಶದ ಪ್ರಜ್ಞಾವಂತ ನಾಗರಿಕರ ಹಕ್ಕು ಆಗಿದೆ ಎಂದರು. ತಹಶೀಲ್ದಾರ್ ಸಿ.ಮಹದೇವಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಮಿಲೇನಿಯಂ, ಸಚಿನ್ ಅವರಿಗೆ ಸಾಕೇತಿಕವಾಗಿ ಹೊಸ ಮತದಾರ ಗುರುತಿನ ಚೀಟಿ ವಿತರಿಸಲಾಯಿತು. ಸಹಾಯಕ ಪೊಲೀಸ್ ಅಧೀಕ್ಷಕ ರಿಷಿಕೇಶ್ ಸೋನಾವಾಣಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.