ಮಂಗಳೂರು, ಜ.05 (Daijiworld News/PY) : ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗೆ ಕಾಲೇಜಿನ ಬೋಧಕೇತರ ಸಿಬ್ಬಂದಿಯೊಬ್ಬ ಕಿರುಕುಳ ನೀಡುತ್ತಿದ್ದ ಎಂಬ ಆರೋಪದ ಮೇಲೆ ಕಾಲೇಜಿನ ಬೋಧಕೇತರ ಸಿಬ್ಬಂದಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಕಾಲೇಜೊಂದರಲ್ಲಿ ಗುತ್ತಿಗೆಯಧಾರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಉಜಿರೆಯ ರೋಹಿತ್ ಎಂಬಾತ ಪ್ರತಿದಿನ ಕಾಲೇಜಿನ ಮೆಟ್ಟಲಿನಲ್ಲಿ ನಿಂತು ವಿದ್ಯಾರ್ಥಿನಿಯರಿಗೆ ಚುಡಾಯಿಸುತ್ತಿದ್ದ ಎಂದು ಹೇಳಲಾಗಿದೆ.
ಶನಿವಾರವೂ ವಿದ್ಯಾರ್ಥಿನಿಯೊಬ್ಬಳ ಮೈಮೇಲೆ ಕೈಹಾಕಿ ಲೈಂಗಿಕ ಕಿರುಕುಳ ನೀಡಲು ಯತ್ನಿಸುತ್ತಿದ್ದ ವೇಳೆ ಅಲ್ಲಿದ್ದ ವಿದ್ಯಾರ್ಥಿನಿಯರೆಲ್ಲರೂ ಬಂದು ರೋಹಿತ್ ಎಂಬಾತನಿಗೆ ಹೊಡೆಯಲು ಮುಂದಾದ ವೇಳೆ ಕಾಲೇಜಿನ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿದ್ದಾರೆ ಎನ್ನಲಾಗಿದೆ.
ರೋಹಿತ್ನ ಅಸಭ್ಯ ವರ್ತನೆಯಿಂದ ಕೋಪಗೊಂಡ ವಿದ್ಯಾರ್ಥಿನಿಯರು ಪೊಲೀಸ್ ಠಾಣೆಗೆ ಧಾವಿಸಿ ರೋಹಿತ್ ವಿರುದ್ದ ದೂರು ನೀಡಿದ್ದು, ಆತನನ್ನು ಬಂಧಿಸಬೇಕೆಂದು ಹಠ ಹಿಡಿದ ಕಾರಣದಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.