ಮಂಗಳೂರು, ಜ 6 (Daijiworld News/MB) : ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಸ್ಮಾರ್ಟ್ ಆಗಿ ಬೆಳೆಯುತ್ತಿರುವ ಮಂಗಳೂರು, ನಗರದಲ್ಲಿ ನಡೆಯುವ ಕೊಲೆ, ಸುಳಿಗೆ ಮೊದಲಾದ ಅಪರಾಧಗಳನ್ನು ಪತ್ತೆ ಹಚ್ಚುವಲ್ಲೂ ಸ್ಮಾರ್ಟ್ ಹಾದಿಯತ್ತ ಹೆಜ್ಜೆ ಇಟ್ಟಿದೆ. ನಗರದ 15 ಜಂಕ್ಷನ್ಗಳಲ್ಲಿ 75 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು ಕ್ಯಾಮೆರಾಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.
ಪೊಲೀಸರಿಗೆ ಕೊಲೆ, ಸುಳಿಗೆ ಮೊದಲಾದ ಅಪರಾಧಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವಂತೆ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದಲ್ಲಿ ನಗರದ 15 ಜಂಕ್ಷನ್ಗಳಲ್ಲಿರುವ ಸ್ಮಾರ್ಟ್ ಫೋಲ್ಗಳಲ್ಲಿ ಒಟ್ಟು 75 ಕ್ಯಾಮೆರಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಜಂಕ್ಷನ್ನಲ್ಲಿಯೂ 360 ಡಿಗ್ರಿ ಸುತ್ತ ಸುತ್ತುವ ಕ್ಯಾಮೆರಗಳ ಸಹಿತ ಪತ್ರಿ ಜಂಕ್ಷನ್ನ ಒಂದು ಸ್ಮಾರ್ಟ್ ಫೋಲ್ನಲ್ಲಿ ಒಟ್ಟು 4 ಕ್ಯಾಮೆರಾಗಳು ಇರಲಿವೆ ಎಂದು ಸ್ಮಾರ್ಟ್ ಸಿಟಿ ಆಯುಕ್ತರಾದ ಮೊಹಮ್ಮದ್ ನಝೀರ್ ತಿಳಿಸಿದ್ದಾರೆ.
ನಮ್ಮ ನಗರಕ್ಕೆ ಸಂಬಂಧಿಸಿದಂತೆ ಟ್ರಾಫಿಕ್, ಮಹಾನಗರ ಪಾಲೆಕೆಯ ವತಿಯಿಂದ ನೀಡುವ ಸೌಲಭ್ಯಗಳನ್ನು ಉಸ್ತುವಾರಿ ನೋಡಿಕೊಳ್ಳಲು ಇದು ಸಹಾಯಕವಾಗಲಿದೆ. ಸಿಸಿ ಟಿವಿ ನಿರ್ವಹಣೆ ಮಾಡಲು ಮಹಾನಗರ ಪಾಲಿಕೆಯ ಮೊದಲ ಮಹಡಿಯಲ್ಲಿ ಕಂಟ್ರೋಲ್ ರೂಂ ಕೂಡಾ ಸಿದ್ಧ ಮಾಡಲಾಗಿದೆ. ಇನ್ನು ಜಂಕ್ಷನ್ಗಳಲ್ಲಿ ಸ್ಮಾರ್ಟ್ ಪೋಲ್ಗಳನ್ನು ಅವಲಡಿಸುವ ಕಾರ್ಯ ನಡೆಯುತ್ತಿದ್ದು ಕೆಲವು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ನಗರದಲ್ಲಿ ಒಟ್ಟು 2000 ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು ಇವೆ. ಇತ್ತೀಚೆಗೆ ಸಾರ್ವಜನಿಕ ವಲಯಗಳಲ್ಲಿ ಒಟ್ಟು 210 ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಸಿಸಿ ಟಿವಿ ಕ್ಯಾಮೆರಾಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.
ಎರಡನೇ ಹಂತದಲ್ಲಿ ಇದೇ ರೀತಿಯಾಗಿ ಇನ್ನೂ 25 ಜಂಕ್ಷನ್ಗಳಲ್ಲಿ ಸುಮಾರು 125 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ನಗರದಲ್ಲಿ ಬಿಜೈ, ಕೆಎಸ್ಆರ್ಟಿಸಿ, ಪದವಿನಂಗಡಿ, ಪಂಪ್ವೆಲ್, ವಾಮಂಜೂರು, ಮಲ್ಲಿಕಟ್ಟೆ, ಪಡೀಲ್, ಮಾರ್ಗನ್ಸ್ಗೇಟ್, ಕುಲಶೇಖರ, ಬೆಂದೂರ್, ಕೊಟ್ಟಾರ ಚೌಕಿ, ಫಳ್ನೀರ್, ಶಕ್ತಿನಗರ ಕ್ರಾಸ್, ಕುಂಟಿಕಾನ,ರಾವ್ ಆಂಡ್ ರಾವ್ ವೃತ್ತ, ಕಾವೂರು ಜಂಕ್ಷನ್ನಲ್ಲಿ ಸಿಸಿಟಿವಿ ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.